ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ಐಟಿ ಪಾರ್ಕ್: ಕೇಂದ್ರ ಸಚಿವ ರಾಜೀವ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 16:02 IST
Last Updated 18 ಆಗಸ್ಟ್ 2021, 16:02 IST

ಮಂಗಳೂರು: ಐಟಿ ತಂತ್ರಜ್ಞಾನವನ್ನು ಬೆಂಗಳೂರಿನಿಂದ ಹೊರಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಐಟಿ ಪಾರ್ಕ್‌ ನಿರ್ಮಿಸಲು ಯೋಚಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಜನಾಶೀರ್ವಾದ ಯಾತ್ರೆಯ ಅಂಗವಾಗಿ ನಗರಕ್ಕೆ ಭೇಟಿ ನೀಡಿದ್ದ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂವಹನ, ಸಂಪರ್ಕ ವ್ಯವಸ್ಥೆಯ ಉನ್ನತೀಕರಣದ ಪ್ರಯತ್ನಗಳು ನಡೆಯುತ್ತಿವೆ. ಆರ್ಥಿಕ ಭದ್ರತೆಯ ಉದ್ದೇಶದಿಂದ ಬರುವ ದಿನಗಳಲ್ಲಿ ಐಟಿ ಕಂಪನಿಗಳು ಹಳ್ಳಿ ಭಾಗಗಳಲ್ಲಿ ಬಂಡವಾಳ ಹೂಡಿ, ಕೆಲಸ ಆರಂಭಿಸಲಿವೆ. ಬೇರೆ ದೇಶಗಳಿಗೆ ಹೋಲಿಸಿದಲ್ಲಿ ಭಾರತದ ತಾಂತ್ರಿಕತೆ ಅದ್ಭುತವಾಗಿದೆ ಎಂದರು.

ಕೊರೊನೋತ್ತರ ಕಾಲದಲ್ಲಿ ಇಂಟರ್‌ನೆಟ್ ಸೌಲಭ್ಯ ತೀರಾ ಅಗತ್ಯವಾಗಿದೆ. ಈ ಕಾರಣ ‘ಭಾರತ್ ನೆಟ್’ ಯೋಜನೆಯಲ್ಲಿ ಪ್ರತಿ ಜಿಲ್ಲೆಯ ಒಂದು ಹಳ್ಳಿಯಂತೆ 5000 ಹಳ್ಳಿಗಳಿಗೆ ಇಂಟರ್‌ನೆಟ್ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಐಟಿ ತಂತ್ರಜ್ಞಾನದ ಅಭಿವೃದ್ಧಿ ಈ ದೇಶದ ಅತಿದೊಡ್ಡ ಭವಿಷ್ಯವಾಗಿದೆ. ಕೋವಿಡ್ ಪೂರ್ವದಲ್ಲೇ ಪ್ರಧಾನಿ ನರೇಂದ್ರ ಮೋದಿ ‘ಭಾರತ್ ನೆಟ್’ ಯೋಜನೆಗೆ ಚಾಲನೆ ನೀಡಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗಿ ಇದನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸಬೇಕಾಗಿದೆ ಎಂದು ಹೇಳಿದರು.

ADVERTISEMENT

‘ಡಿಜಿಟಲ್ ಗ್ರಾಮ’ ಸರ್ಕಾರದ ಪೈಲೆಟ್ ಪ್ರಾಜೆಕ್ಟ್ ಆಗಿದೆ. ಕರ್ನಾಟಕದ ಪ್ರತಿ ಹಳ್ಳಿಗೂ ಇಂಟರ್‌ನೆಟ್ ಸಂಪರ್ಕ ಈ ಯೋಜನೆಯ ಉದ್ದೇಶವಾಗಿದೆ. ಪ್ರತಿ ಜಿಲ್ಲೆಯಲ್ಲೂ ಒಂದು ಹಳ್ಳಿಯನ್ನು ಆಯ್ಕೆ ಮಾಡಿ, ಡಿಜಿಟಲ್ ಯೋಜನೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.