ADVERTISEMENT

ಸ್ವರ್ಗ, ನರಕ ಮನೆಯಲ್ಲೇ: ಶಶಿಕಲಾ ಜೊಲ್ಲೆ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ: ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 13:32 IST
Last Updated 11 ಫೆಬ್ರುವರಿ 2020, 13:32 IST
ಧರ್ಮಸ್ಥಳದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಇದ್ದರು.
ಧರ್ಮಸ್ಥಳದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಇದ್ದರು.   

ಉಜಿರೆ: ‘ಸ್ವರ್ಗ-ನರಕ ಎರಡೂ ಮನೆಯಲ್ಲಿ ಇದೆ. ಗಂಡ-ಹೆಂಡತಿ, ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸ, ಅನ್ಯೋನ್ಯತೆ, ಸೌಹಾರ್ದದಿಂದ ಜೀವನ ನಡೆಸಿದರೆ ಮನೆಯಲ್ಲೆ ಸ್ವರ್ಗ . ಅದಿಲ್ಲವಾದಲ್ಲಿ ಮನೆಯೇ ನರಕ ಸದೃಶವಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಅವರು ಧರ್ಮಸ್ಥಳದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.

‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನವಜೀವನ ಸಮಿತಿ ಆಶ್ರಯದಲ್ಲಿ ಹೆಗ್ಗಡೆಯವರು ಹಮ್ಮಿಕೊಂಡ ಸಮಾಜಮುಖಿ ಕಾರ್ಯಗಳು ಹಾಗೂ ವ್ಯಸನಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವ ಕಾರ್ಯ ಸ್ತುತ್ಯರ್ಹವಾಗಿದೆ. ಕಿರು ಆರ್ಥಿಕ ಯೋಜನೆ ಮೂಲಕ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಮಹಿಳೆಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಶೇಕಡಾ ನೂರು ಸಾಲ ಮರು ಪಾವತಿಯಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಹತ್ತು-ಹಲವು ಕಾರಣಗಳಿಂದ ಜನರು ವ್ಯಸಗಳಿಗೆ ಬಲಿಯಾಗುತ್ತಾರೆ. ಮಹಿಳೆಯರು ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೂ ಎಚ್ಚರಿಕೆ, ಮಾರ್ಗದರ್ಶನ ನೀಡಬೇಕು. ಎಲ್ಲ ಗ್ರಾಮಗಳು ವ್ಯಸನ ಮುಕ್ತ ಗ್ರಾಮಗಳಾದಾಗ ಮಾತ್ರ ಮಹಿಳೆಯರು ಶಾಂತಿ, ನೆಮ್ಮದಿಯ ಜೀವನ ನಡೆಸಿ, ನ್ಯಾಯ ಒದಗಿಸಿದಂತಾಗುತ್ತದೆ’ ಎಂದು ಸಚಿವೆ ಅಭಿಪ್ರಾಯ ಪಟ್ಟರು.

ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ‘ಮಹಿಳೆಯರು ದುಶ್ಚಟಗಳ ದಮನ ಮಾಡುವ ಸಂಕಲ್ಪ ಶಕ್ತಿ ಮತ್ತು ಆತ್ಮ ಬಲ ಹೊಂದಿರಬೇಕು’ ಎಂದು ಹೇಳಿದರು. ಶಾಸಕ ಹರೀಶ್ ಪೂಂಜ ಮಾತನಾಡಿ, ‘ಹೆಗ್ಗಡೆಯವರ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ವ್ಯಸನಮುಕ್ತ ಭಾರತದ ಕನಸು ನನಸಾಗುತ್ತಿದೆ’ ಎಂದರು. ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ವ್ಯಸನಮುಕ್ತರು ದೃಢ ಸಂಕಲ್ಪದಿಂದ ಪರಿಶುದ್ಧ, ಆರೋಗ್ಯಪೂರ್ಣ ಜೀವನ ನಡೆಸಬೇಕು. ಕುಟುಂಬದ ಸದಸ್ಯರು ವ್ಯಸನ ಮುಕ್ತರನ್ನು ಪ್ರೀತಿ-ವಿಶ್ವಾಸ ಮತ್ತು ಗೌರವದಿಂದ ನೋಡಿಕೊಳ್ಳಬೇಕು’ ಎಂದು ಅವರುಸಲಹೆ ನೀಡಿದರು. ‘ಶಾಲಾ-ಕಾಲೇಜುಗಳ ಬಳಿ ಮಾದಕದ್ರವ್ಯ ಮಾರಾಟ ಜಾಲ ಹೆಚ್ಚಾಗುತ್ತಿದೆ. ಇದನ್ನು ಸರ್ಕಾರ ತಡೆಗಟ್ಟಬೇಕು ಎಂದು ಹೇಳಿದರು. ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿ. ಪಾಸ್ , ರಾಜ್ಯ ಸಮಿತಿ ಅಧ್ಯಕ್ಷ ವಿ. ರಾಮಸ್ವಾಮಿ,ಭಾಸ್ಕರ್ ಎನ್. ಮತ್ತು ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.