
ಬೆಳ್ತಂಗಡಿ: ತಾಲ್ಲೂಕಿನ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಯಡ್ಕ ಬಳಿ ನಡೆಯುತ್ತಿರುವ ಮುಗ್ರೋಡಿ ಕಂಪನಿಯ ಮಿಕ್ಸಿಂಗ್ ಘಟಕದ ವಿರುದ್ಧ ಸ್ಥಳೀಯ ಜನರು ಗ್ರಾ.ಪಂ. ಎದುರು ಗುಮ್ಮಟೆ ಬಡಿದು ಪ್ರತಿಭಟಿಸಿದರು.
ಮಲೆಯಡ್ಕ ಬಳಿ ನಡೆಯುತ್ತಿರುವ ಮಿಕ್ಸರ್ ಘಟಕದ ತ್ಯಾಜ್ಯ ನೀರು ನೇರವಾಗಿ ಇಲ್ಲಿ ಹರಿಯುತ್ತಿರುವ ತೋಡನ್ನು ಸೇರುತಿದ್ದು ಇದರಿಂದಾಗಿ ಇಲ್ಲಿನ ಕುಡಿಯುವ ನೀರು ಕಲುಷಿತವಾಗಿದೆ. ರಾತ್ರಿ ಹಗಲು ಎನ್ನದೆ ಇಲ್ಲಿ ಕೆಲಸ ನಡೆಯುತ್ತಿದ್ದು ಸದಾ ಹೊಗೆಯನ್ನು ಹೊರಬಿಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳ ಆರೋಗ್ಯ ಹದಗೆಟ್ಟಿದೆ ಎಂದು ಜನರು ಆರೋಪಿಸಿದರು.
ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಬದುಕುವ ಹಕ್ಕನ್ನು ನೀಡಿ ಎಂಬ ಘೋಷಣೆಯೊಂದಿಗೆ ಸ್ಥಳೀಯ ಆದಿವಾಸಿ ಸಮುದಾಯದವರು ತಮ್ಮ ಸಾಂಪ್ರದಾಯಿಕ ವಾದ್ಯ ಗುಮ್ಮಟೆಯನ್ನು ಬಡಿದು ಪ್ರತಿಭಟನೆ ವ್ಯಕ್ತಪಡಿಸಿದರು. ನಮ್ಮನ್ನು ಬದುಕಲು ಬಿಟ್ಟು ಅಭಿವೃದ್ಧಿ ಮಾಡಿ ಎಂದು ಆಗ್ರಹಿಸಿದರು.
ಬಳಿಕ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಯಿತು. ಜನವಸತಿ ಪ್ರದೇಶದಲ್ಲಿರುವ ಮಿಕ್ಸಿಂಗ್ ಘಟಕದ ಕಾರ್ಯನಿರ್ವಹಣೆಯನ್ನು ಕೂಡಲೇ ಸ್ಥಗಿತ ಗೊಳಿಸಬೇಕು, ತ್ಯಾಜ್ಯವನ್ನು ನದಿ ನೀರಿಗೆ ಹರಿಯ ಬಿಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು, ಕೃಷಿ ಭೂಮಿ, ಕುಡಿಯುವ ನೀರನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು, ಮಾಲಿನ್ಯಕಾರಕವಾದ ಹೊಗೆಯಿಂದ ಆರೋಗ್ಯ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇವೆಲ್ಲವುಗಳ ಬಗ್ಗೆ ಗಮನಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಲೆಯಡ್ಕ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ್ ಬಿಲ್ಲವ, ಸಂಚಾಲಕರಾದ ಕೊರಗಪ್ಪ ಗೌಡ, ರಮೇಶ್ ಮೊಗೇರ, ಸತೀಶ್ ನಾಯ್ಕ, ಸದಾಶಿವ ನಾಯ್ಕ, ನಾರಾಯಣ ನಾಯ್ಕ, ತಿಮ್ಮಯ್ಯ ನಾಯ್ಕ, ಸುಮಂಗಲಾ ಜಿನ್ನಪ್ಪ ನಾಯ್ಕ, ಮುತ್ತಪ್ಪ ನಾಯ್ಕ, ಉಜಿರೆ, ಅತ್ತಾಜೆ ಮಾಚಾರು, ಸೋಮಂತಡ್ಕ ಕೂಡುಕಟ್ಟು ನಿವಾಸಿಗಳು, ತಾಲ್ಲೂಕು ಮರಾಟಿ ಸಮುದಾಯದ ಪ್ರಮುಖರಾದ ಸಂತೋಷ್ ಅತ್ತಾಜೆ, ಹರ್ಷಿತ್ ಕೊಡಂಗೆ, ಪ್ರಶಾಂತ್ ಯು.ಪಿ, ವಸಂತ ನಡ ಮತ್ತು ಪದ್ಮನಾಭ ಗೌಡ ಸುರ್ಯ, ಕೊರಗಪ್ಪ ಗೌಡ, ಸ್ಟ್ಯಾನ್ಲಿ ಪಿಂಟೊ, ವಿಜಯ ಗೌಡ, ಸುಕೇಶ್ ಸುರ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.