ADVERTISEMENT

ಸಿಲಿಂಡರ್ ದರ ಏರಿಕೆ: ಜನರ ಶೋಷಣೆ

ಕೇಂದ್ರ ಸರ್ಕಾರಕ್ಕೆ ಜನರ ಕಾಳಜಿ ಇಲ್ಲ: ಯು.ಟಿ. ಖಾದರ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 2:13 IST
Last Updated 3 ಜುಲೈ 2021, 2:13 IST
ಯು.ಟಿ.ಖಾದರ್
ಯು.ಟಿ.ಖಾದರ್   

ಮಂಗಳೂರು: ಅಡುಗೆ ಅನಿಲ ಸಿಲಿಂಡರ್‌ಗೆ ಏಕಾಏಕಿ ₹ 25 ಹೆಚ್ಚಿಸಿರುವ ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ನಿರಂತರ ಬೆಲೆ ಏರಿಕೆಯಿಂದ ಸರ್ಕಾರ ಜನರ ಶೋಷಣೆ ಮಾಡುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಡುಗೆ ಸಿಲಿಂಡರ್ ದರ ಏರಿಕೆಯಿಂದ ಹೋಟೆಲ್‌ಗಳಲ್ಲಿ ತಿಂಡಿಗಳ ದರವೂ ಏರಿಕೆಯಾಗುತ್ತದೆ. ಇದರಿಂದ ಶ್ರಮಿಕ ವರ್ಗದವರು, ಬಡ ವಿದ್ಯಾರ್ಥಿಗಳಿಗೆ ಮತ್ತಷ್ಟು ಕಷ್ಟವಾಗಲಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹ 2–3 ಏರಿಕೆಯಾದರೂ ಗಲಾಟೆ ಮಾಡುತ್ತಿದ್ದ ಬಿಜೆಪಿಯವರು ಈಗ ಮೌನವಾಗಿದ್ದಾರೆ. ಜನರ ಮುಗ್ಧತೆ ದುರ್ಬಳಕೆ ಮಾಡಿಕೊಂಡು ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಇನ್ನೆಷ್ಟು ವರ್ಷ ಈ ದಬ್ಬಾಳಿಕೆ ಸಹಿಸಿಕೊಳ್ಳಬೇಕು’ ಎಂದರು.

‘ತೈಲ ಕಂಪನಿಗಳಿಗೆ ಹಿಂದಿನ ಸರ್ಕಾರ ಹಣ ಪಾವತಿ ಬಾಕಿ ಉಳಿಸಿಕೊಂಡಿದ್ದರಿಂದ ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ತೈಲ ಕಂಪನಿಗಳಿಗೆ ಹಣ ಪಾವತಿಸಲು ಬಾಂಡ್ ವ್ಯವಸ್ಥೆ ರೂಪಿಸಲಾಗಿದೆ. ಹಿಂದಿನಿಂದಲೂ ಇದೇ ರೀತಿ ನಡೆದುಕೊಂಡು ಬಂದಿದ್ದು, ಪ್ರಸ್ತುತ ₹ 3.5 ಸಾವಿರ ಕೋಟಿ ಮಾತ್ರ ಬಾಕಿ ಇದೆ. ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಬದಲು, ತೈಲ ತೆರಿಗೆಯಿಂದ ಎಷ್ಟು ಹಣ ಸಂಗ್ರಹವಾಗಿದೆ, ಅದರಲ್ಲಿ ತೈಲ ಕಂಪನಿಗಳಿಗೆ ಎಷ್ಟು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.

ADVERTISEMENT

ಸೋನು ಸೂದ್ ನೆರವು:

‘ಉಳ್ಳಾಲದಲ್ಲಿ ನಿರ್ಮಾಣವಾಗಲಿರುವ ಆಮ್ಲಜನಕ ಘಟಕಕ್ಕೆ ಬಾಲಿವುಡ್ ನಟ ಸೋನು ಸೂದ್ ಆರ್ಥಿಕ ನೆರವು ನೀಡಿದ್ದಾರೆ. ಈ ಘಟಕಕ್ಕೆ ಸುಮಾರು ₹ 1.50 ಕೋಟಿ ವೆಚ್ಚವಾಗಲಿದ್ದು, ಶೇ 80ರಷ್ಟು ಸೋನು ಸೂದ್ ಸಂಸ್ಥೆ ಒದಗಿಸಿದೆ. ಉಳಿದ ಶೇ 20ರಷ್ಟನ್ನು ಸ್ಥಳೀಯ ನಿಧಿಯಿಂದ ಸರಿದೂಗಿಸಲಾಗಿದೆ’ ಎಂದು ಖಾದರ್ ತಿಳಿಸಿದರು.

‘ಚೆಂಬುಗುಡ್ಡೆ ಹಿಂದೂ ಸ್ಮಶಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್ಫೊಸಿಸ್ ಸಂಸ್ಥೆ ಮುಂದೆ ಬಂದಿದೆ. ಸ್ಥಳ ನಿಗದಿ ಬಗ್ಗೆ ಸ್ಥಳೀಯ ಸಮಿತಿಯ ತೀರ್ಮಾನ ಮುಖ್ಯವಾಗುತ್ತದೆ. ಅವರ ಒಪ್ಪಿಗೆಯ ಪ್ರಕಾರ ಅಲ್ಲಿ ವಿದ್ಯುತ್ ಚಿತಾಗಾರ ಆಗಬೇಕೇ ಬೇಡವೇ ಎನ್ನುವುದು ತೀರ್ಮಾನವಾಗಲಿದೆ. ನಾನು ಯಾರ ಮೇಲೂ ಒತ್ತಡ ಹೇರಿಲ್ಲ. ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮೋನು, ಈಶ್ವರ ಉಳ್ಳಾಲ್, ಜಬ್ಬಾರ್, ಸಂತೋಷ್ ಶೆಟ್ಟಿ,ಸುರೇಶ್ ಭಟ್ನಗರ, ರಮೇಶ್, ಜಕ್ರಿಯ, ಆಲ್ವಿನ್ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.