
ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಸರ್ವೆ ನಂ. 123/1ರಲ್ಲಿ ಇರುವ 3634.70 ಎಕರೆ ಕೃಷಿ ಭೂಮಿಗೆ ಸಂಬಂಧಿಸಿ ಸ್ಥಗಿತಗೊಂಡಿರುವ ಪ್ಲಾಟಿಂಗ್ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಪಹಣಿ ಪತ್ರ ದೊರಕುವಂತೆ ಕ್ರಮಕೈಗೊಳ್ಳಬೇಕು ಎಂದು ಸುಳ್ಯ ಶಾಶಕಿ ಭಾಗೀರಥಿ ಮುರುಳ್ಯ ಕಡಬ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಡಬದಲ್ಲಿ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಶಾಸಕಿಯನ್ನು ಮಂಗಳವಾರ ಭೇಟಿಯಾಗಿ ಚರ್ಚೆ ನಡೆಸಿದರು.
ಈ ಭೂಮಿಯನ್ನು 245 ಮಂದಿಗೆ ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಕೃಷಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ನಿರ್ದೇಶನದಂತೆ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಇದರ ಪರಿಣಾಮವಾಗಿ, ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಸಮರ್ಪಕ ದಾಖಲೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಫಲಾನುಭವಿಗಳು ತಿಳಿಸಿದರು.
‘ಸಾರ್ವಜನಿಕರ ಹಿತದ ಕೆಲಸ ಮಾಡಲು ವಿಳಂಬ ಮಾಡುವ ಅಧಿಕಾರಿಗಳನ್ನು ಅವರ ಸ್ಥಾನದಿಂದಲೇ ತೆಗೆದು ಹಾಕಲಾಗುವುದು. ಜನರಿಗೆ ನ್ಯಾಯ ದೊರೆಯುವವರೆಗೆ ನಾನು ಬಿಟ್ಟು ಕೊಡುವುದಿಲ್ಲ. ಉಪ ತಹಶೀಲ್ದಾರ್ ಕಡತಗಳನ್ನು ಸಿದ್ಧಪಡಿಸಿ ಉಪ ವಿಭಾಗಾಧಿಕಾರಿಯಿಂದ ಅನುಮತಿ ಪಡೆದು ಅರಣ್ಯ ಮತ್ತು ಕಂದಾಯ ಇಲಾಖೆಯಲ್ಲಿರುವ ಕಡತಗಳನ್ನು ಶೀಘ್ರ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ಪಹಣಿ ಪತ್ರ ಸಿಗುವಂತೆ ಕ್ರಮಕೈಗೊಳ್ಳಬೇಕು’ ಎಂದು ಶಾಸಕಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಪ ತಹಶೀಲ್ದಾರ್‌ಗಳಾದ ಸಾಹೀದ್ದುಲ್ಲ ಖಾನ್, ಗೋಪಾಲ, ಭೂಮಾಪನಾ ಇಲಾಖೆ ಅಧಿಕಾರಿಗಳು, ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹೇಶ್, ಜನಾರ್ದನ, ಭವಾನಿ, ಮುಖಂಡರಾದ ತುಕ್ರಪ್ಪ ಶೆಟ್ಟಿ ನೂಜೆ, ಮಹೇಶ್, ನಾರಾಯಣ ಗೌಡ, ಗೋಪಾಲ ಗೌಡ ಸೇರಿದಂತೆ ಸುಮಾರು 50 ಫಲಾನುಭವಿಗಳು ಶಾಸಕರನ್ನು ಭೇಟಿ ಮಾಡಿದ ನಿಯೋಗದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.