ADVERTISEMENT

ಫಾಝಿಲ್ ಹತ್ಯೆಗೆ ಬಳಸಿದ ಹೆಚ್ಚುವರಿ ವಾಹನ ವಶಕ್ಕೆ ಕ್ರಮ: ಪೊಲೀಸ್ ಕಮಿಷನರ್

ಹತ್ಯೆ ಆರೋಪಿಗಳ ಮುಂದುವರಿದ ತನಿಖೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 9:33 IST
Last Updated 9 ಆಗಸ್ಟ್ 2022, 9:33 IST
ಎನ್. ಶಶಿಕುಮಾರ್
ಎನ್. ಶಶಿಕುಮಾರ್   

ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಹತ್ಯೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಅವರ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಆರೋಪಿಗಳು ಇನ್ನೂ ಎರಡು ಹೆಚ್ಚುವರಿ ವಾಹನಗಳನ್ನು ಬಳಸಿರುವುದು ತಿಳಿದು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳ ಜತೆ ನಿಯಮಾನುಸಾರವೇ ವ್ಯವಹರಿಸಲಾಗಿದೆ. ಸುರತ್ಕಲ್ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಲಾಗಿಲ್ಲ. ಈ ಬಗ್ಗೆ ಸುರತ್ಕಲ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಆ ರೀತಿ ಯಾವುದೇ ಆರೋಪಿಗೆ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೆಲವು ಪ್ರಮುಖರು ಈ ಬಗ್ಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆಂದು ಗೊತ್ತಾಗಿಲ್ಲ’ ಎಂದರು.

ADVERTISEMENT

‘ಫಾಝಿಲ್ ಕುಟುಂಬದ ಬಹುತೇಕ ಸದಸ್ಯರ ಬಳಿ ನನ್ನ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್ ಫೋನ್ ನಂಬರ್‌ಗಳು ಇವೆ. ಏನಾದರೂ ಅನುಮಾನಗಳು ಇದ್ದಲ್ಲಿ ಗಮನಕ್ಕೆ ತರಬಹುದು. ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.