ADVERTISEMENT

ಮೂಡುಬಿದಿರೆ: 30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಚಾಲನೆ– ಮೇಳೈಸಿದ ವೈಭವ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 20:05 IST
Last Updated 10 ಡಿಸೆಂಬರ್ 2024, 20:05 IST
ಆಳ್ವಾಸ್‌ ವಿರಾಸತ್‌ನಲ್ಲಿ ಡೊಳ್ಳು ಕುಣಿತದ ಮೋಡಿ
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ಆಳ್ವಾಸ್‌ ವಿರಾಸತ್‌ನಲ್ಲಿ ಡೊಳ್ಳು ಕುಣಿತದ ಮೋಡಿ ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.   

ಮೂಡುಬಿದಿರೆ: ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಒಳ್ಳೆಯದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ. ಆ ಹಾದಿಯಲ್ಲಿ ಸಮಾಜ, ದೇಶ ಬೆಳೆಯಬೇಕು. ನಾವು ಪ್ರಕೃತಿಯನ್ನು, ಹೃದಯವನ್ನೂ ಅರಳಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಡಿ.15ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಇಲ್ಲಿನ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಳೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣ ಕೈತೋಟ ಮಾಡಿ. ಮಣ್ಣು, ಪರಿಸರವನ್ನು ಪ್ರೀತಿಸಿ ಎಂದು ಸಲಹೆ ನೀಡಿದರು.

ADVERTISEMENT

ಪಂಚೇಂದ್ರೀಯಗಳಿಗೆ ಉಣಬಡಿಸುವ ಡಾ.ಮೋಹನ ಆಳ್ವ ಅವರದ್ದು ಹೃದಯ ವೈಶಾಲ್ಯದ ವ್ಯಕ್ತಿತ್ವ. ಇಂಥ ವ್ಯಕ್ತಿತ್ವ ನಾಡಿನಾದ್ಯಂತ ಹೆಚ್ಚಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಆರ್.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಆಳ್ವರ ದೃಷ್ಟಿಯೇ ಕ್ರಿಯೆಯಾಗಿ ಇಲ್ಲಿ ರೂಪುಗೊಂಡಿದೆ. ಅವರ ಪ್ರಯೋಗ ಇಂದು ನಾಡಿಗೆ ಕೊಡುಗೆ ನೀಡಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಅಂದು ಊರಿಗೆ ಸೀಮಿತವಾಗಿದ್ದ ವಿರಾಸತ್ ಇಂದು ರಾಷ್ಟ್ರೀಯ ಹಬ್ಬವಾಗಿದೆ ಎಂದರು.

ಇಂದು ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 52 ಕೋಟಿ ಇದೆ. ಯುವ ಸಂಪತ್ತಿನ ಬಗ್ಗೆ ನಾವು ಯೋಚಿಸಬೇಕು. ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ವಿರಾಸತ್ ಅನ್ನು ಸಮಗ್ರವಾಗಿ ರೂಪಿಸಲಾಗಿದ್ದು, ಪಂಚೇಂದ್ರಿಯಗಳಿಗೆ ಜ್ಞಾನ ನೀಡುವ ಕಾರ್ಯಕ್ರಮವಾಗಿದೆ. ಯುವಕರು, ಹಿರಿಯರು, ವೃದ್ಧರೆಲ್ಲರಿಗೂ ವಿರಾಸತ್ ಮುದ ನೀಡಲಿದೆ ಎಂದರು.

ಸಾಂಸ್ಕೃತಿಕ ವೈಭವ: ನಂದಿಕೋಲು, ಸೋಮನ ಕುಣಿತ, ಕಿಂದರಿ ಜೋಗಿ, ಕೊರಗರ ಡೊಳ್ಳು ಕುಣಿತ, ಜಗ್ಗಳಿಕೆ ಮೆಳ, ಕರಡಿ ಮಜಲು, ಪುರವಂತಿಕೆ ತಂಡಗಳು ಕರ್ನಾಟಕದ ಕಲಾವೈಭವ ಝಲಕ್ ಪ್ರದರ್ಶಿಸಿದವು.

ಕೇರಳದ ದೇವರ ವೇಷಧಾರಿಗಳ ಕುಣಿತ, ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಝಗಮಗಿಸುವ ಪ್ರಭಾವಳಿಯೊಂದಿಗೆ ವೇಷಧಾರಿಗಳು ಸಾಗಿ ಬರುತ್ತಿದ್ದಂತೆ ಸಂಚಲನ ಸೃಷ್ಟಿಯಾಯಿತು. ರಾಜಸ್ಥಾನದ ಕೋಲಾಟ ಕಲಾವಿದರು ಹೆಗಲೇರಿ ಪ್ರದರ್ಶಿಸಿದ ಪಿರಮಿಡ್ ಕಸರತ್ತು ಮೈನವಿರೇಳಿಸುವಂತಿತ್ತು. ಮಯೂರ ನೃತ್ಯ, ಬಗೆ ಬಗೆಯ ಬಣ್ಣದ ಕೊಡೆಗಳು, ಸ್ಯಾಕ್ಸೊಪೋನ್ ನಾಗಸ್ವರ, ತಂಡ, ತಮಟೆ ವಾದನ
ತಟ್ಟೀರಾಯ, ಬಲೂನ್ ಬೊಂಬೆಗಳು, ದೀಪಧಾರಿ ಕನ್ನಿಕೆಯರ ತಂಡಗಳು ರಂಗಿನ ಲೋಕವನ್ನೇ ಸೃಷ್ಟಿಸಿದವು.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಚೈನೀಸ್ ಡ್ರ್ಯಾಗನ್ ಕುಣಿತ, ಶ್ರೀಲಂಕಾ ಮುಖವಾಡ, ಹುಲಿ ವೇಷ ಕುಣಿತ ಮನಮೋಹಕವಾಗಿತ್ತು.
ಸಾಂತಾಕ್ಲಾಸ್ ವೇಷ, ಶ್ವೇತವಸ್ತ್ರ ಧರಿಸಿದ ಪುಟಾಣಿಗಳು, ಕರಾವಳಿಯ ಬ್ಯಾರಿ ಕಲಾ ಪ್ರಕಾರವಾದ ದಫ್ ತಂಡಗಳ ಪ್ರದರ್ಶನಗಳು ಗಮನ ಸೆಳೆದವು‌.

ರಂಜಿಸಿದ ವೇಷಗಳು: ನಡು ನಡುವೆ ಸಾಗಿ ಬಂದ ಹುಲಿ, ಸಿಂಹ, ಚಿಂಪಾಂಜಿ, ಮೀನು, ಕೋಳಿ, ಗೂಳಿ, ಕಟ್ಟಪ್ಪ, ಕಂಬಳ ಕೋಣಗಳು, ಬೆಂಕಿ ಉಗುಳುವ ಘಟೋತ್ಕಚ, ಶಿವಾಜಿ, ಆಂಜನೇಯ, ಶಿವ ಪಾರ್ವತಿ, ಅಘೋರಿಗಳ ಭಾರಿ ಗಾತ್ರದ ವೇಷಗಳು ವಿಶೇಷ ಮನರಂಜನೆ ಒದಗಿಸಿದವು.

ಆಳ್ವಾಸ್‌ ವಿರಾಸತ್‌ನಲ್ಲಿ ನಡೆದ ರಥಾರತಿಯ ಸೊಬಗು
ಆಳ್ವಾಸ್‌ ವಿರಾಸತ್‌ನಲ್ಲಿ ನಡೆದ ರಥಾರತಿಯ ಸೊಬಗು ಪ್ರಜಾವಾಣಿ ಚಿತ್ರ: ಫಕ್ರುದ್ದೀನ್‌ ಎಚ್‌.
ವಿರಾಸತ್‌ನಲ್ಲಿ ಮನ ಸೆಳೆದ ಕಲಾಮೇಳಗಳು
ವಿರಾಸತ್‌ನಲ್ಲಿ ಮನ ಸೆಳೆದ ಕಲಾಮೇಳಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.