ಮೂಡುಬಿದಿರೆ: ಸಮಾಜದಲ್ಲಿ ಸಂಘಟಿತರಾಗಿ, ಒಳ್ಳೆಯ ಕೆಲಸಗಳನ್ನು ಮಾಡುವ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಹೇಳಿದರು.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಐದು ದಿನ ನಡೆಯುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಬದುಕಿಗೆ ಚೈತನ್ಯವನ್ನು ನೀಡುತ್ತವೆ. ದಸರಾ ಹಬ್ಬವು ಸಂತೋಷ ಮತ್ತು ಸೌಹಾರ್ದದ ಸಂಕೇತವಾಗಿದೆ ಎಂದರು.
ನವಮಿ ಸಮೂಹ ಸಂಸ್ಥೆಗಳ ಮಾಲೀಕ ನಂದಕುಮಾರ್ ಕುಡ್ವ ಅವರಿಗೆ ಪ್ರಸಕ್ತ ವರ್ಷದ ಸಮಾಜ ಮಂದಿರ ಪುರಸ್ಕಾರ ಪ್ರದಾನ ಮಾಡಲಾಯಿತು.
ಸುರೇಶ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಸಮಾಜ ಮಂದಿರ ಸಭಾದ ಅಧ್ಯಕ್ಷ ಅಭಯಚಂದ್ರ ಜೈನ್, ಸಮಾಜ ಮಂದಿರ ಸಮಾಜದ ಸ್ವತ್ತು. ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು.
ದಸರಾ ಉತ್ಸವದ ಸಂಚಾಲಕ ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿ ಗಣೇಶ್ ಕಾಮತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.