ADVERTISEMENT

ಮೂಡುಬಿದಿರೆ: ‘ಕೋವಿಡ್‌ಗೆ 25 ಸಾವಿರ ಡಾಲರ್ ನೆರವು’

ರೋಟರಿ ಟೆಂಪಲ್ ಟೌನ್ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:06 IST
Last Updated 29 ಜುಲೈ 2021, 5:06 IST
ಮೂಡುಬಿದಿರೆಯ ರೋಟರಿ ಟೆಂಪಲ್ ಟೌನ್ ಪದಗ್ರಹಣ ಸಮಾರಂಭದಲ್ಲಿ ಕುಸುಮಾವತಿ ಮತ್ತು ಸುಶೀಲಾ ಅವರನ್ನು ಗೌರವಿಸಲಾಯಿತು.
ಮೂಡುಬಿದಿರೆಯ ರೋಟರಿ ಟೆಂಪಲ್ ಟೌನ್ ಪದಗ್ರಹಣ ಸಮಾರಂಭದಲ್ಲಿ ಕುಸುಮಾವತಿ ಮತ್ತು ಸುಶೀಲಾ ಅವರನ್ನು ಗೌರವಿಸಲಾಯಿತು.   

ಮೂಡುಬಿದಿರೆ: ‘ಸೇವೆ ಹಾಗೂ ಸಂತೋಷದ ಬದುಕು ನೀಡುವುದೇ ರೋಟರಿಯ ಉದ್ದೇಶ. ರೋಟರಿಯಲ್ಲಿದ್ದು ನಾವೆಷ್ಟು ಸಂತೋಷದಿಂದಿದ್ದೇವೆ ಎನ್ನುವುದಕ್ಕಿಂತ ನಮ್ಮ ಸೇವೆಯಿಂದ ಜನ ಎಷ್ಟು ಸಂತೃಪ್ತರಾಗಿದ್ದಾರೆ ಎನ್ನುವುದು ಮುಖ್ಯ’ ಎಂದು ರೋಟರಿ ಜಿಲ್ಲೆ ಮಾಜಿ ರಾಜ್ಯಪಾಲ ಅಭಿನಂದನ್ ಶೆಟ್ಟಿ ಹೇಳಿದರು.

ಮಂಗಳವಾರ ಮೂಡುಬಿದಿರೆ ಟೆಂಪಲ್ ಟೌನ್ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ರಮೇಶ್ ಕುಮಾರ್ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ನೇರವೇರಿಸಿ ಅವರು ಮಾತನಾಡಿದರು. ‘ಕೋವಿಡ್ ನಮಗೆ ಹಲವು ಪಾಠ ಕಲಿಸಿದೆ. ಮನುಕುಲದ ಒಳಿತಿಗೆ ಕಳೆದ ವರ್ಷ ರೋಟರಿ ಅಂತರರಾಷ್ಟ್ರೀಯ ಸಂಸ್ಥೆ 25 ಸಾವಿರ ಡಾಲರ್‌ ನೆರವು ನೀಡಿದೆ’ ಎಂದರು.

ಜಿಲ್ಲಾ ಉಪರಾಜ್ಯಪಾಲ ಸುರೇಂದ್ರ ಕಿಣಿ ಮಾತನಾಡಿ, ಸಂಘಟನೆ ಮತ್ತು ಸೇವೆಯಿಂದ ರೋಟರಿ ಸಂಸ್ಥೆ ಸಮಾಜಕ್ಕೆ ಆದರ್ಶವಾಗಿದೆ ಎಂದರು. ವಲಯ ಸಭಾಪತಿ ಡಾ.ಮಹಾವೀರ ಜೈನ್, ಜಿಎಸ್ಆರ್ ಡಾ.ಹರೀಶ್ ನಾಯಕ್ ಶುಭ ಹಾರೈಸಿದರು.

ADVERTISEMENT

ನಿರ್ಗಮಿತ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ, ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ಅವರನ್ನು ಕ್ಲಬ್‌ ಪರವಾಗಿ ಸನ್ಮಾನಿಸಲಾಯಿತು. ಕೊರೊನಾ ಸೇನಾನಿಗಳಾದ ವೇಣೂರಿನ ಕುಸುಮಾವತಿ ಹಾಗೂ ಮೂಡುಬಿದಿರೆಯ ಸುಶೀಲಾ ಅವರನ್ನು ಗೌರವಿಸಲಾಯಿತು. ಸೇವಾ ಚಟುವಟಿಕೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಅಶಕ್ತರಿಗೆ ನೆರವು, ಶಾಲೆಗಳಿಗೆ ಪುಸ್ತಕ ವಿತರಿಸಲಾಯಿತು. ಡಾ.ಅಮರ್‌ದೀಪ್ ಮತ್ತು ಶಾಂತಲಾ ಸೀತಾರಾಮ ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ಮಂಜುನಾಥ ಪೂಜಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.