ADVERTISEMENT

ಮಂಗಳೂರು | ವಿದೇಶದಲ್ಲಿ ಉದ್ಯೋಗದ ಆಮಿಷ: 300ಕ್ಕೂ ಹೆಚ್ಚು ಜನರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 13:08 IST
Last Updated 19 ಮೇ 2025, 13:08 IST
<div class="paragraphs"><p>ವಂಚನೆ</p></div>

ವಂಚನೆ

   

ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿ ಕಚೇರಿ ಹೊಂದಿರುವ ಸಂಸ್ಥೆಯೊಂದು ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ 300ಕ್ಕೂ ಹೆಚ್ಚು ಜನರಿಗೆ ವಂಚಿಸಿದೆ ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜ ಆರೋಪಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋಸ ಹೋದವರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ರಾಜ್ಯಗಳ ಉದ್ಯೋಗಾಕಾಂಕ್ಷಿಗಳು ಇದ್ದಾರೆ. ಹೈಯರ್ ಗ್ಲೋ ಎಲಿಗಂಟ್ ಒವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ನ್ಯೂಝಿಲೆಂಡ್‌ನ ವಲರಿಸ್ ಎಂಬರಿಗ್ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 185 ಯುವಜನರಿಂದ ₹1.80 ಲಕ್ಷ, ಏಜೆಂಟರ ಮೂಲಕ ಬಂದ 60 ಜನರಿಂದ ತಲಾ ₹3 ಲಕ್ಷ, ಇತರ ರಾಜ್ಯಗಳ ಏಜೆಂಟರ ಮೂಲಕ ಬಂದವರಿಂದ ತಲಾ ₹4ರಿಂದ ₹5 ಲಕ್ಷ ಹಣವನ್ನು ಆನ್‌ಲೈನ್‌ ಮೂಲಕ ಸಂಗ್ರಹಿಸಿದೆ’ ಎಂದರು. 

ADVERTISEMENT

ನವೆಂಬರ್ ತಿಂಗಳಲ್ಲಿ ಸಂಸ್ಥೆಯ ಗ್ರೇಟಲ್ ಕ್ವಾಡರ್ಸ್ ಮತ್ತು ಅಶ್ವಿನಿ ಆಚಾರ್ಯ ಹಾಗೂ ಚೈತ್ರಾ ಎಂಬುವವರು ಹಣ ನೀಡಿದವರನ್ನು ಸಂಪರ್ಕಿಸಿ, ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದ್ದರು. ವೈದ್ಯಕೀಯ ದೃಢತೆ ತ‍ಪಾಸಣೆಯನ್ನೂ ಮಾಡಲಾಗಿತ್ತು. ಜನವರಿ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ‌ಗುತ್ತಿಗೆ ಸಹಿ, ಜನವರಿ ಕೊನೆಯ ವಾರದಲ್ಲಿ ವೀಸಾ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಏಪ್ರಿಲ್ ಕೊನೆಯ ವಾರದಲ್ಲಿ ಕೊರಿಯರ್ ಮೂಲಕ ಉದ್ಯೋಗಾಂಕ್ಷಿಗಳ ವಿಳಾಸಕ್ಕೆ ಪಾಸ್‌ಪೋರ್ಟ್ ಮತ್ತಿತರ ವಿವರಗಳು ಬಂದಿದ್ದವು. ಈ ವೇಳೆಯೇ ಹಣ ನೀಡಿದವರಿಗೆ ಅನುಮಾನಗಳು ಮೂಡಲಾರಂಭಿಸಿದ್ದವು ಎಂದು ಅವರು ವಿವರಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ, ನಗರ ಪೊಲೀಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ನಂತರ ಹೈಯರ್ ಗ್ಲೋ ಸಂಸ್ಥೆಯ ಮುಂಬೈ ನಿವಾಸಿ ಮಸೈಯುಲ್ಲಾ ಅತಿಯುಲ್ಲಾ ಖಾನ್, ಮಂಗಳೂರಿನ ಸಿಬ್ಬಂದಿ ಗ್ರೆಟೆಲ್ ಕ್ವಾರ್ಡಸ್, ಅಶ್ವಿನಿ ಆಚಾರ್ಯ ಹಾಗೂ ಚೈತ್ರಾ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ ಎಂದು ಹೇಳಿದರು.

ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರು ತಾವು ಸಂಪರ್ಕಿಸುವ ಏಜೆಂಟರು ಅಥವಾ ಏಜೆನ್ಸಿಗಳು ಬೆಂಗಳೂರಿನಲ್ಲಿರುವ ವಿದೇಶಾಂಗ ಇಲಾಖೆಯ ಪ್ರೊಟೆಕ್ಟರ್ ಆಫ್ ಎಮಿಗ್ರೇಟ್ಸ್ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಕಾರ್ಮಿಕ ಘಟಕದ ಜಯರಾಜ್ ಕೋಟ್ಯಾನ್, ಸಂತ್ರಸ್ತರಾದ ಪ್ರದೀಪ್ ಪ್ರೇಮ್ ಡಿಸೋಜ, ವಿಲ್ಟನ್, ಶೇಖ್ ಮುಹಮ್ಮದ್, ಲಿಖಿತ್ ಅಂಚನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.