ADVERTISEMENT

ಮೂಡುಬಿದಿರೆ: ಮೂರೂವರೆ ದಶಕದ ಬಳಿಕ ಅಮ್ಮನ ಮಡಿಲು ಸೇರಿದ ಮಗ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 12:51 IST
Last Updated 23 ಜೂನ್ 2025, 12:51 IST
ಮೂರೂವರೆ ದಶಕಗಳ ಬಳಿಕ ಊರಿಗೆ ಬಂದ ಮೂಡುಬಿದಿರೆ ಇರುವೈಲಿನ ಚಂದ್ರಶೇಖರ್ ಅವರು ತಾಯಿಯನ್ನು ಆಲಿಂಗಿಸಿಕೊಂಡು ಸಂಭ್ರಮಿಸಿದರು
ಮೂರೂವರೆ ದಶಕಗಳ ಬಳಿಕ ಊರಿಗೆ ಬಂದ ಮೂಡುಬಿದಿರೆ ಇರುವೈಲಿನ ಚಂದ್ರಶೇಖರ್ ಅವರು ತಾಯಿಯನ್ನು ಆಲಿಂಗಿಸಿಕೊಂಡು ಸಂಭ್ರಮಿಸಿದರು   

ಮೂಡುಬಿದಿರೆ: ಹೊಟ್ಟೆಪಾಡಿಗಾಗಿ ಮುಂಬೈಗೆ ತೆರಳಿ ಬಳಿಕ ಮನೆಯವರ ಸಂಪರ್ಕ ಕಡಿದುಕೊಂಡಿದ್ದ ಇಲ್ಲಿನ ಇರುವೈಲು ಗ್ರಾಮದ ವ್ಯಕ್ತಿಯೊಬ್ಬರು ಸುಮಾರು 36 ವರ್ಷಗಳ ಬಳಿಕ ತಾಯಿಯ ಬಳಿಗೆ ಬಂದಿದ್ದಾರೆ.

ಇರುವೈಲು ಕೊನ್ನೆಪದವು ಮಧುವನಗಿರಿಯ ಚಂದ್ರು ಯಾನೆ ಚಂದ್ರಶೇಖರ್ ಅವರು ಮೂರೂವರೆ ದಶಕಗಳ ಬಳಿಕ ಊರಿಗೆ ಬಂದಿದ್ದಾರೆ.

ಸಂಕಪ್ಪ– ಗೋಪಿ ದಂಪತಿಯ ಹಿರಿಯ ಪುತ್ರ ಚಂದ್ರಶೇಖರ್ 25ನೇ ವಯಸ್ಸಿನಲ್ಲಿ ಉದ್ಯೋಗಕ್ಕಾಗಿ ಮುಂಬೈಗೆ ತೆರಳಿದ್ದರು. ಕೆಲವು ತಿಂಗಳು ಪತ್ರದ ಮೂಲಕ ಸಂಪರ್ಕದಲ್ಲಿದ್ದ ಅವರು ಬಳಿಕ ಸಂಪರ್ಕ ಕಡಿದುಕೊಂಡಿದ್ದರು. ಈ ಅವಧಿಯಲ್ಲಿ ಅವರು ಮಾನಸಿಕ ಆಘಾತಗೊಂಡಿದ್ದರು ಎನ್ನಲಾಗಿದೆ. ಒಂದು ದಶಕದಿಂದ ದೇವಸ್ಥಾನ, ಮಠ, ಮಂದಿರಗಳಲ್ಲಿ ದಿನ ಕಳೆಯುತ್ತಿದ್ದರು.

ADVERTISEMENT

ಅವರ ಸಂಕಷ್ಟ ಅರಿತು ಅಲ್ಲಿನ ಮರಾಟಿ ಸಮುದಾಯದ ಬಾಲು ಕಾಂಬ್ಲೆ ಎಂಬುವರು ಅವರನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ, ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಚಂದ್ರು ಮರಳಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾತ್ರಿ ಶಾಲೆಗೂ ಸೇರಿ ಓದು ಮುಂದುವರಿಸಿದ್ದರು. ಆದರೂ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ಅಭಯಕೊಟ್ಟ ‌ದೇವತೆ: ಮಗನಿಗಾಗಿ ಹಲವು ವರ್ಷ ಹುಡುಕಾಟ ನಡೆಸಿ ದುಖದಲ್ಲಿದ್ದ ಚಂದ್ರು ಮನೆಯವರು ಕಳೆದ ವರ್ಷದ ಮೇ ತಿಂಗಳಲ್ಲಿ ಮನೆಯಲ್ಲಿ ನಡೆದ ಮಂತ್ರದೇವತೆಯ ದರ್ಶನದಲ್ಲಿ ಮಗನನ್ನು ಪತ್ತೆ ಹಚ್ಚಿಕೊಡುವಂತೆ ಮೊರೆಹೋಗಿದ್ದರು.

‘ಆತ ಜೀವಂತ ಇದ್ದಾನೆ, ಒಂದು ವರ್ಷದೊಳಗೆ ಮನೆಗೆ ತರಿಸುತ್ತೇನೆ’ ಎಂದು ದೈವ ಅಭಯ ನೀಡಿತ್ತು. ಕೆಲವು ದಿನಗಳ ಬಳಿಕ ಮನೆಯವರು ಮುಂಬೈಗೆ ತೆರಳಿ ಚಂದ್ರುವಿಗೆ ಆಸರೆ ನೀಡಿದ್ದ ಮರಾಟಿ ಕುಟುಂಬದವರ ಮಾಹಿತಿ ಸಂಗ್ರಹಿಸಿ ಅವರ ಜತೆ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.

ದೈವದ ದರ್ಶನಕ್ಕೆ ಮೊದಲೇ ಪ್ರತ್ಯಕ್ಷ: 2025ರ ಮೇ ತಿಂಗಳ ಅಂತ್ಯದಲ್ಲಿ ಇರುವೈಲು ಮಧುವನಗಿರಿಯಲ್ಲಿ ದೈವದ ದರ್ಶನಕ್ಕೆ ಮೂರು ದಿನ ಇರುವಾಗಲೇ ಚಂದ್ರಶೇಖರ್ ಮನೆಗೆ ಬಂದಿದ್ದರು. ಈಗ ಅವರಿಗೆ 60 ವರ್ಷವಾಗಿದೆ.

‘ನಾನು ಮಾನಸಿಕವಾಗಿ ಸರಿ ಇರಲಿಲ್ಲ. ಕುಟುಂಬದವರ ನೆನಪು ಇರಲಿಲ್ಲ. ಮುಂಬೈನ ಹಲವು ದೇವಸ್ಥಾನಗಳನ್ನು ತಿರುಗಾಡಿ ಅಲ್ಲೇ ಉಳಿಯುತ್ತಿದ್ದೆ. ಇತ್ತೀಚೆಗೆ ಮನೆಗೆ ಬರಬೇಕೆಂಬ ಆಸೆ ಉಂಟಾಗಿ ಊರಿಗೆ ಬಂದೆ’ ಎಂದು ಚಂದ್ರಶೇಖರ್ ಮನೆಯವರಿಗೆ ತಿಳಿಸಿದ್ದಾರೆ. ಇನ್ನು ಪ್ರತಿ ವರ್ಷ ಮನೆಯಲ್ಲಿ ನಡೆಯುವ ದೈವದ ಕೆಲಸಕ್ಕೆ ಬರುತ್ತೇನೆ ಎಂದಿದ್ದಾರೆ. ಸುಮಾರು ಒಂದು ತಿಂಗಳು ಮನೆಯಲ್ಲಿದ್ದ ಚಂದ್ರಶೇಖರ್ ಜೂನ್ 22ರಂದು ಮುಂಬೈಗೆ ತೆರಳಿದ್ದಾರೆ. ಮನೆಯವರು ಖುಷಿಯಿಂದಲೇ ಮಗನನ್ನು ಕಳುಹಿಸಿಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.