ADVERTISEMENT

ಬೆಳ್ತಂಗಡಿ: ಸಾಮಾನ್ಯ ಮಳೆಗೆ ಪರದಾಡಿದ ವಾಹನ ಸವಾರರು 

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 4:31 IST
Last Updated 15 ಏಪ್ರಿಲ್ 2024, 4:31 IST
ಸೀಟು ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದೆ
ಸೀಟು ಅಂಬಡ್ತ್ಯಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಿಕಪ್‌ ವಾಹನಕ್ಕೆ ಡಿಕ್ಕಿಯಾಗಿದೆ   

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ತಾಲ್ಲೂಕಿನ ವಿವಿಧೆಡೆ ರಸ್ತೆ ಅಗೆದು ಹಾಕಲಾಗಿದ್ದು, ಈ ಭಾಗದಲ್ಲಿ ಶನಿವಾರ ಬಿದ್ದ ಮಳೆಗೆ ರಸ್ತೆ ಜಾರುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದರು.

ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ರಸ್ತೆಯನ್ನು ಅಗೆಯಲಾಗಿದ್ದು, ಮದ್ದಡ್ಕ, ಗುರುವಾಯನಕೆರೆ, ಲಾಯಿಲ, ಉಜಿರೆ, ನಿಡಿಗಲ್, ಮುಂಡಾಜೆ ಪರಿಸರದಲ್ಲಿ ಮಣ್ಣಿನ ರಸ್ತೆ ಇದೆ. ಶನಿವಾರ ಸಂಜೆ ಮತ್ತು ರಾತ್ರಿ ಮಳೆಯಾಗಿದ್ದು, ರಸ್ತೆ ಜಾರುತ್ತಿದ್ದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ಹಲವು ದ್ವಿಚಕ್ರ ವಾಹನ ಸವಾರರು ರಸ್ತೆಗೆ ಉರುಳಿ ಬಿದ್ದರು. ಸೀಟು ಅಂಬಡ್ತ್ಯಾರು ಬಳಿ ಜಾರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದ ಕೆಎಸ್‌ಆರ್‌ಟಿಸಿ ಬಸ್ ಪಿಕಪ್ ಪಾಹನಕ್ಕೆ ಡಿಕ್ಕಿಯಾಗಿದ್ದು, ವಾಹನ ಜಖಂ ಆಗಿದೆ. ಇದರಿಂದಾಗಿ ಕೆಲ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪಾದಚಾರಿಗಳೂ ತೊಂದರೆ ಅನುಭವಿಸಿದರು.

ADVERTISEMENT

ಅಭಿವೃದ್ಧಿಯ ಹೆಸರಲ್ಲಿ ರಸ್ತೆ ಬದಿಯ ಚರಂಡಿ ಮುಚ್ಚಿದ್ದು, ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುವ ಸಾಧ್ಯತೆ ಇದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಜಲ್ಲಿ ರಾಶಿ ಹಾಕಲಾಗಿದೆ. ಮಳೆ ಸುರಿದರೆ ಕಾಮಗಾರಿ ಇನ್ನಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಆತಂಕ.

ನವೆಂಬರ್‌ನಿಂದ ಈ ಭಾಗದಲ್ಲಿ ರಸ್ತೆ ಅಗೆಯುವ ಕೆಲಸ ಆರಂಭವಾಗಿದೆ. ಎಲ್ಲ ಪ್ರದೇಶಗಳಲ್ಲೂ ರಸ್ತೆ ಅಗೆದು ಬಿಟ್ಟಿದ್ದಾರೆ. ಉಜಿರೆಯಿಂದ ಚಾರ್ಮಾಡಿ ವರೆಗಿನ ರಸ್ತೆ ಬದಿಯ ಮರಗಳ ತೆರವು ಬಾಕಿ ಇದೆ. ಮರಗಳ ತೆರವಿನ ಬಳಿಕ ಮತ್ತೆ ರಸ್ತೆ ಅಗೆಯಲಿದ್ದು, ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಸಮಸ್ಯೆ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.