ಮಂಗಳೂರು: ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸಸ್ ಮತ್ತು ರಿಸರ್ಚ್ ಸೆಂಟರ್ ಮತ್ತು ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ನಡುವೆ ರಿಯಾಯಿತಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಲಾಯಿತು. ಎನ್‌ಎಂಪಿಎ ಆಸ್ಪತ್ರೆಯ ನಿರ್ವಹಣೆಯನ್ನು ಶ್ರೀನಿವಾಸ ಮೆಡಿಕಲ್ ಕಾಲೇಜು ನೋಡಿಕೊಳ್ಳಲಿದೆ.
ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ವೆಂಕಟ ರಮಣ ಅಕ್ಕರಾಜು ಮಾತನಾಡಿ, ರಾಷ್ಟ್ರದ ಆರ್ಥಿಕತೆ ಹೆಚ್ಚಿಸುವಲ್ಲಿ ನಾಗರಿಕರ ಆರೋಗ್ಯವೂ ಮುಖ್ಯವಾಗಿದೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚಳದ ಕಾರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (PPP) ಮಹತ್ವದ್ದು ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಎ. ರಾಘವೇಂದ್ರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆದಷ್ಟು ಬೇಗ ಗುಣಮಟ್ಟದ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯ ಒದಗಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ. ಆರೈಕೆಯ ಗುಣಮಟ್ಟಕ್ಕೆ ಧಕ್ಕೆಯಾಗದಂತೆ 24X7 ಸೇವೆಯನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಶ್ರೀನಿವಾಸ್ ರಾವ್, ಎನ್ಎಂಪಿಎ ಹಣಕಾಸು ಸಲಹೆಗಾರ ವಿನಾಯಕ್ ರಾವ್ ಬಿ.ಎಸ್. ಮಾತನಾಡಿದರು.
ಶ್ರೀನಿವಾಸ್ ರಾವ್ ಮತ್ತು ಎನ್‌ಎಂಪಿಎ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ
ಡಾ.ಸುರೇಖಾ ಎನ್.ಹೊಸ್ಕೇರಿ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದರು. ಶ್ರೀನಿವಾಸ ವಿವಿ ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರಾದ ವಿಜಯಲಕ್ಷ್ಮಿ ಆರ್.ರಾವ್ ಮತ್ತು ಮಿತ್ರಾ ಎಸ್.ರಾವ್, ಮೇಘನಾ ಎಸ್.ರಾವ್, ಸಮನಾ ಎಸ್.ರಾವ್, ಮೌಲ್ಯಮಾಪನ ಕುಲಸಚಿವ ಶ್ರೀನಿವಾಸ್ ಮಯ್ಯ ಇದ್ದರು.
ಕುಲಸಚಿವ ಅಜಯ್ ಕುಮಾರ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್ ರೊಸಾರಿಯೊ ವಂದಿಸಿದರು. ಕುಲಸಚಿವ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಎನ್‌ಎಂಪಿಎ ನಡೆಸುತ್ತಿರುವ 32 ಹಾಸಿಗೆಗಳ ಆಸ್ಪತ್ರೆ ಮತ್ತು ಬಂದರು ಸಮೀಪ ನಿರ್ಮಾಣವಾಗಲಿರುವ ಅತ್ಯಾಧುನಿಕ 150 ಹಾಸಿಗೆಗಳ ಆಸ್ಪತ್ರೆಯ ನಿರ್ವಹಿಸಲು ಶ್ರೀನಿವಾಸ ವಿವಿ ವಿಶೇಷ ಹಕ್ಕು ಮತ್ತು ಪರವಾನಗಿ ಪಡೆದಿದೆ. 60 ವರ್ಷಗಳ ಕಾಲ ಪಿಪಿಪಿ ಮಾದರಿಯಲ್ಲಿ ಇದನ್ನು ಗುತ್ತಿಗೆ ನೀಡಲಾಗಿದೆ. ಬಂದರು ನೌಕರರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ನಿವೃತ್ತ ಸಿಬ್ಬಂದಿ ಮತ್ತು ಅವರ ಅವಲಂಬಿತರು ಹಾಗೂ ಪಣಂಬೂರು, ಬೈಕಂಪಾಡಿ, ಕುಳಾಯಿ, ಸುರತ್ಕಲ್ ಮತ್ತಿತರ 5 ಕಿ.ಮೀ ವ್ಯಾಪ್ತಿಯ ನಿವಾಸಿಗಳು ಆಸ್ಪತ್ರೆಯ ಪ್ರಯೋಜನ ಪಡೆಯಬಹುದು ಎಂದು ತಿಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.