ADVERTISEMENT

ಎಂಆರ್‌ಪಿಎಲ್‌ ನೇಮಕಾತಿ: ಸ್ಥಳೀಯರ ಕಡೆಗಣನೆ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2021, 21:27 IST
Last Updated 25 ಮೇ 2021, 21:27 IST

ಮಂಗಳೂರು: ಎಂಆರ್‌ಪಿಎಲ್‌ನ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

2019 ರಲ್ಲಿ ಎಂಆರ್‌ಪಿಎಲ್ 224 ಹುದ್ದೆಗಳ ನೇಮಕಾತಿಗೆ ರಾಷ್ಟಮಟ್ಟದಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಿತ್ತು. ಸ್ಥಳೀಯರಿಗೆ ಆದ್ಯತೆ ನೀಡದ ಈ ನೇಮಕಾತಿ ಪ್ರಕ್ರಿಯೆ ತಡೆಯಬೇಕು ಎಂಬ ಆಗ್ರಹ ಆಗ ಕೇಳಿಬಂದಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಟಿ.ಎಸ್‌.ನಾಗಾಭರಣ ಅವರು ಎಂಆರ್‌ಪಿಎಲ್‌ಗೆ ಪತ್ರ ಬರೆದು, ‘ನೇಮಕಾತಿ ಆದೇಶವನ್ನು ತಡೆ ಹಿಡಿದು, ಸ್ಥಳೀಯರಿಗೆ ಆದ್ಯತೆ ನೀಡುವುದಕ್ಕಾಗಿ ತಿದ್ದುಪಡಿ ಆದೇಶ ಹೊರಡಿಸಬೇಕು’ ಎಂದು ಸೂಚಿಸಿದ್ದರು. ನಂತರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ADVERTISEMENT

ಇದೀಗ ಪ್ರಕ್ರಿಯೆ ಮತ್ತೆ ಆರಂಭಿಸಲಾಗಿದ್ದು, 184 ಜನರನ್ನು ನೇಮಿಸಲಾಗಿದೆ. ಇವರಲ್ಲಿ ಕರ್ನಾಟಕದ 13 ಜನರಷ್ಟೇ ಇದ್ದು, ಉಳಿದವರು ಹೊರರಾಜ್ಯದವರು ಎನ್ನುವ ದೂರುಗಳು ಕೇಳಿಬಂದಿವೆ.

‘ಎಂಆರ್‌ಪಿಎಲ್‌ನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್‌, ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯುವಂತೆ ಸೂಚಿಸಿದ್ದಾರೆ. ಅದಕ್ಕೆ ಎಂಆರ್‌ಪಿಎಲ್‌ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ’ ಎಂದು ಶಾಸಕ ಡಾ.ವೈ. ಭರತ್‌ ಶೆಟ್ಟಿ ಹೇಳಿದ್ದಾರೆ.

‘ನಳಿನ್‌ಕುಮಾರ್ ಕಟೀಲ್ ಹಾಗೂ ಬಿಜೆಪಿ ಶಾಸಕರಿಗೆ ಕಾಳಜಿ, ಪ್ರಾಮಾಣಿಕತೆ ಇದ್ದರೆ, ರಾಜ್ಯ ಸರ್ಕಾರವು ನೇಮಕಾತಿಗಳಲ್ಲಿ ಸ್ಥಳೀಯರಿಗೆ ಶೇ 80 ಮೀಸಲಾತಿ ಕಡ್ಡಾಯಗೊಳಿಸಿ ಹೊಸ ಕಾಯ್ದೆ ತರಲು ಕ್ರಮ ಕೈಗೊಳ್ಳಲಿ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಒತ್ತಾಯಿಸಿದ್ದಾರೆ.

‘ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಪ್ರವೇಶ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ ಬಹುತೇಕ ಮುಗಿದಿದೆ. ಆದರೆ, ನೇಮಕಾತಿ ಆದೇಶ ನೀಡಿಲ್ಲ’ ಎಂದು ಎಂಆರ್‌ಪಿಎಲ್‌ ಸಾರ್ವಜನಿಕ ಸಂಪರ್ಕಾಧಿಕಾರಿ ರುಡಾಲ್ಫ್‌ ನೊರೊನ್ಹ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.