ADVERTISEMENT

ಮುಂಡೋಳಿ: ಸೊಪ್ಪು ತಿಂದು ನಾಲ್ಕು ಜಾನುವಾರು ಗಂಭೀರ, ಒಂದು ಸಾವು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 10:41 IST
Last Updated 9 ಮಾರ್ಚ್ 2023, 10:41 IST
   

ಉಳ್ಳಾಲ (ದಕ್ಷಿಣ ಕನ್ನಡ): ಸೊಪ್ಪು ತಿಂದ ಎರಡು ಹಸುಗಳು, ಮೂರು ಕರುಗಳು ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿಯಲ್ಲಿ ಅನಾರೋಗ್ಯಕ್ಕೀಡಾಗಿದ್ದು, ಒಂದು ಹಸು ಮೃತಪಟ್ಟಿದೆ. ಉಳಿದ ನಾಲ್ಕು ಜಾನುವಾರುಗಳ ಸ್ಥಿತಿ ಗಂಭೀರವಾಗಿದೆ.
ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ.

ಕೃಷಿಕ ಸಂಜೀವ ಪೂಜಾರಿ ಅವರ ಮನೆಯ ಕೊಟ್ಟಿಗೆಯಲ್ಲಿ ಜಾನುವಾರುಗಳು ಮಲಗುವುದಕ್ಕೆ ಅನುಕೂಲ ಮಾಡಿಕೊಡಲು ಬುಧವಾರ ಮಧ್ಯಾಹ್ನ ಗೋಳಿ (ಕರಿ ಬಸ್ರಿ ) ಸೊಪ್ಪು ಗಳನ್ನು ತಂದು ಹಾಸಿದ್ದರು. ಜಾನುವಾರುಗಳು ಆ ಸೊಪ್ಪನ್ನು ತಿಂದು ಅಸ್ವಸ್ಥಗೊಂಡಿದ್ದವು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶುವೈದ್ಯರಿಗೆ ಕರೆ ಮಾಡಿದ್ದರು . ಅವರು ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದರು. ತಿಂದ ಎಲೆಗಳ ವಿಷಾಹಾರ ಇಂದು ಮುಂಜಾನೆ ವೇಳೆಗೆ ಹಸುವಿನ ಇಡಿ ದೇಹಕ್ಕೆ ಪಸರಿಸಿ ನಸುಕಿನ ಜಾವ ಒಂದು ಹಸು ಮೃತಪಟ್ಟಿತ್ತು. ಇನ್ನುಳಿದ ಹಸುಗಳು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಮನೆಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಚಂದ್ರಹಾಸ್ ಹಾಗೂ ತಲಪಾಡಿ ಪಶು ವೈದ್ಯಾಧಿಕಾರಿ ಡಾ. ರಚನಾ ಜಾನುವಾರುಗಳಿಗೆ ಚಿಕಿತ್ಸೆ ನೀಡಿದರು.

'ಜಾನುವಾರುಗಳು ಗೋಳಿ ಸೊಪ್ಪು (ಕರಿ ಬಸ್ರಿ) ತಿಂದಿವೆ. ಅದು ವಿಷವಾಗಿ ಪರಿವರ್ತನೆಯಾಗಿ ರಕ್ತದ ಜೊತೆಗೆ ಸೇರಿಕೊಂಡಿದೆ. ಎಲೆಯಲ್ಲಿರುವ ಸೊನೆ ದೇಹದಲ್ಲಿ ಹಬ್ಬಿದೆ. ಇದರಿಂದ ಒಂದು ಜಾನುವಾರುಗಳಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಮಾ. 17 ರಂದು ಇಲಾಖೆಗೆ ಸಂಬಂಧಿಸಿದ ಸಮ್ಮೇಳನ ನಡೆಯಲಿದ್ದು, ಫಲಾನುಭವಿಗಳ ಆಯ್ಕೆ‌ ಕುರಿತು ಚರ್ಚಿಸಲು
ಸಹಾಯಕ ಆಯುಕ್ತರು ಕೊಣಾಜೆಯಲ್ಲಿ ಸಭೆ ಕರೆದಿದ್ದರು. ಹಾಗಾಗಿ ಬುಧವಾರ ಸ್ಥಳಕ್ಕೆ ಬರಲು ಸಾಧ್ಯವಾಗಿಲಿಲ್ಲ. ಸಹಾಯಕ ಚಂದ್ರಹಾಸ್ ಎಂಬವರನ್ನು ಕಳುಹಿಸಿದ್ದೆ' ಎಂದು ಕೋಟೆಕಾರು
ಪಶುವೈದ್ಯಾಧಿಕಾರಿ ಡಾ.ಗಜೇಂದ್ರ ಕುಮಾರ್ ಪಿ.ಕೆ ಅವರು ತಿಳಿಸಿದರು.

ADVERTISEMENT

-೦-

ಉಳ್ಳಾಲ ತಾಲೂಕಿಗೆ ಒಬ್ಬರೇ ಪಶುವೈದ್ಯಾಧಿಕಾರಿ !
ಉಳ್ಳಾಲ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೋಟೆಕಾರು ಪಶುವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಾವೂರು, ಕೊಣಾಜೆ, ಅಂಬ್ಲಮೊಗರು , ಕುರ್ನಾಡು ಪಶುಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳೇ ಇಲ್ಲ. ಒಬ್ಬ ಪಶುವೈದ್ಯಾಧಿಕಾರಿ ಮಾತ್ರ ಕಾರ್ಯನಿರ್ವಹಿಸುವಂತಾಗಿದೆ. ತಲಪಾಡಿಯ ಅಧಿಕಾರಿ ಡಾ. ರಚನಾ ಅವರಿಗೆ ಅಡ್ಯಾರು ಭಾಗದ ಜವಾಬ್ದಾರಿ ಇರುವುದರಿಂದ ಅವರೂ ತಾಲ್ಲೂಕಿನಲ್ಲಿ ನಿರ್ದಿಷ್ಟ ದಿನಗಳಷ್ಟೇ ಕರ್ತವ್ಯ ನಿರ್ವಹಣೆಗೆ ಲಭ್ಯ ಇರುತ್ತಾರೆ. ಇದರಿಂದ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಒಬ್ಬರೇ ಪಶುವೈದ್ಯಾಧಿಕಾರಿ ಕಾರ್ಯನಿರ್ವಹಿಸಬೇಕಿದೆ. ಸಹಾಯಕ ಇನ್ಪೆಕ್ಟರ್ ಹುದ್ದೆಯೂ ಖಾಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.