ADVERTISEMENT

ಮಂಗಳೂರು ‌| 4 ದಿನಗಳಲ್ಲಿ ಬೇರೆ ಬೇರೆ ಧರ್ಮದ ಇಬ್ಬರ ಹತ್ಯೆ; ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 2 ಮೇ 2025, 5:24 IST
Last Updated 2 ಮೇ 2025, 5:24 IST
ಮಂಗಳೂರಿನ ಎ.ಜೆ.ಆಸ್ಪತ್ರೆ ಬಳಿ ಗುರುವಾರ ರಾತ್ರಿ  ಸೇರಿದ್ದ ಜನಸ್ತೋಮ
ಮಂಗಳೂರಿನ ಎ.ಜೆ.ಆಸ್ಪತ್ರೆ ಬಳಿ ಗುರುವಾರ ರಾತ್ರಿ  ಸೇರಿದ್ದ ಜನಸ್ತೋಮ   

ಮಂಗಳೂರು: ಕುಡುಪುವಿನಲ್ಲಿ ವಯನಾಡಿನಶ್ರಫ್‌ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ನಡೆದ  ನಾಲ್ಕೇ ದಿನಗಳಲ್ಲಿ ರೌಡಿಶೀಟರ್ ಬಜಪೆಯ ಸುಹಾಸ್ ಶೆಟ್ಟಿ ಹತ್ಯೆ ನಡೆದಿದೆ. ಎರಡು ಬೇರೆ ಬೇರೆ ಧರ್ಮದವರ ಹತ್ಯೆಗಳು ಬೆನ್ನು ಬನ್ನಲ್ಲೇ ನಡೆದ ಬಳಿಕ ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್‌ಗೆ ವ್ಯವಸ್ಥೆ ಮಾಡಲಾಗಿದೆ. 

ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಂದೋ ಬಸ್ತ್‌ ಸಲುವಾಗಿ ಹೊರ ಜಿಲ್ಲೆಗಳಿಂದ ಭದ್ರತಾ ಪಡೆಗಳನ್ನು ನಗರಕ್ಕೆ ಕರೆಸಿಕೊಳ್ಳಲಾಗುತ್ತಿದೆ. 

‘ಹೊರ ಜಿಲ್ಲೆಗಳಿಂದ ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ದರ್ಜೆಯ  ಅಧಿಕಾರಿಗಳನ್ನು ಇಲ್ಲಿಗೆ ಕಳುಹಿಸುವಂತೆ ಮೇಲಧಿಕಾರಿಗಳನ್ನು ಕೋರಿದ್ದೇವೆ. ಇವತ್ತು ರಾತ್ರಿಯಿಂದಲೇ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದೇವೆ. ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ನಾಕಾ ಬಂದಿಗೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್‌ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪೊಲೀಸ್‌ ಇಲಾಖೆಯ ವೈಫಲ್ಯ: ಭರತ್ ಶೆಟ್ಟಿ

‘ಹಿಂದೂ ಕಾರ್ಯಕರ್ತರು ಈ ರೀತಿ ಕೊಲೆಯಾಗುತ್ತಿದ್ದಾರೆ. ಎಲ್ಲ ಕಡೆಯೂ ಸಮಾಜ ಘಾತುಕ ಶಕ್ತಿಗಳಿಗೆ ಕುಮ್ಮಕ್ಕು ಕೊಡುತ್ತಿರುವ ಕಾರಣಕ್ಕೆ ಈ ರೀತಿ ಘಟನೆ ನಡೆಯುತ್ತಿವೆ. ಪ್ರಶಾಂತ್ ಪೂಜಾರಿ ಹಾಗೂ ಇತರ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳನ್ನು ಠಾಣೆಗೆ ಕರೆಸಬೇಕು. ಅವರ ಚಲನವಲನ ಮೇಲೆ ನಿಗಾ ಇಡಬೇಖು ಎಂದು ಪದೇ ಪದೇ ಹೇಳಿದ್ದರೂ ಕಡೆಗಣಿಸಲಾಗಿದೆ. ಇದನ್ನು ನೋಡಿದಾಗ ಪೊಲೀಸ್‌ ಇಲಾಖೆಯ ವೈಫಲ್ಯ ಕಂಡುಬರುತ್ತಿದೆ ಎಂದು ಶಾಸಕ ವೈ.ಭರತ್‌ ಶೆಟ್ಟಿ ಹೇಳಿದರು.

ಎ.ಜೆ.ಆಸ್ಪತ್ರೆಗೆ ಗುರುವಾರ ರಾತ್ರಿ ಭೇಟಿ ನೀಡಿದ ಅವರು, ‘ಸುಹಾಸ್ ಶೆಟ್ಟಿ ಹತ್ಯೆ ಮಾಡಿದವರನ್ನು  ಪೊಲೀಸರು ತಕ್ಷಣ ಬಂಧೀಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್ ‘ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪೂರ್ವ ಯೋಜಿತ ಕೃತ್ಯ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಪೊಲೀಸ್ ಇಲಾಖೆಯ ಗುಪ್ತಚರ ಇಲಾಖೆಗೆ ಮಾಹಿತಿ ಇಲ್ಲದೇ ಇಂತಹ ಹತ್ಯೆ ನಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.