ಮಂಗಳೂರು: ‘ಕೊಲೆಗಳು ಆಗುತ್ತಲೇ ಇರುತ್ತವೆ. ಕೊಲೆಯಾದ ಪ್ರತಿಯೊಬ್ಬರ ಮನೆಗೆ ಸಚಿವರು ಹೋಗಲೇಬೇಕು ಎಂದೇನೂ ಇಲ್ಲ. ಕೊಲೆ ಏಕೆ ಆಗಿದೆ ಎಂಬುದೂ ಮುಖ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶನಿವಾರ ಹೇಳಿದರು.
ಬಜಪೆ ಬಳಿ ಈಚೆಗೆ ಹತ್ಯೆಗೀಡಾದ ಹಿಂದುತ್ವ ಪರ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಮನೆಗೆ ಸಚಿವರು ಭೇಟಿ ನೀಡಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಸಚಿವರು ಹೀಗೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅವರು, ‘ಸುಹಾಸ್ ಶೆಟ್ಟಿ ಕೊಲೆ ಏಕೆ ಆಗಿದೆ ಎಂಬುದನ್ನು ತಿಳಿದಿರುವ ಸರ್ಕಾರ, ತಪ್ಪಿತಸ್ಥರನ್ನು ಬಂಧಿಸಿ ಜವಾಬ್ದಾರಿ ನಿರ್ವಹಿಸಿದೆ. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ’ ಎಂದರು.
‘ಆರೋಪಿಗಳನ್ನು ಬಂಧಿಸಿದ್ದೇವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ. ಎನ್‌ಐಎಗೆ ತನಿಖೆ ವಹಿಸಬೇಕು ಎಂಬ ಬಿಜೆಪಿಯವರ ಒತ್ತಾಯಕ್ಕೆ ಉತ್ತರಿಸಲು ಆಗುವುದಿಲ್ಲ. ಬಿಜೆಪಿಯವರು ಊಹಾಪೋಹದ ಹೇಳಿಕೆ ಬಿಟ್ಟು ಸ್ಪಷ್ಟ ಮಾಹಿತಿ ಇದ್ದರೆ ತಿಳಿಸಲಿ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.