ADVERTISEMENT

ಮನ ತಣಿಸಿದ ‘ಪಾಸಿಟಿವ್‌ ವೈಬ್ಸ್‌’ ಸಂಗೀತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 15:57 IST
Last Updated 20 ಜುಲೈ 2019, 15:57 IST
ಮಂಗಳೂರಿನಲ್ಲಿ ಶನಿವಾರ ನಡೆದ ‘ಪಾಸಿಟಿವ್‌ ವೈಬ್ಸ್‌’ ಸಂಗೀತ ಸಂಜೆಯಲ್ಲಿ ಪೋಕೊ ಎ ಪೋಕೊ ತಂಡದ ಕಲಾವಿದರು ಗಾಯನ ಪ್ರಸ್ತುತಪಡಿಸಿದರು.– ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಶನಿವಾರ ನಡೆದ ‘ಪಾಸಿಟಿವ್‌ ವೈಬ್ಸ್‌’ ಸಂಗೀತ ಸಂಜೆಯಲ್ಲಿ ಪೋಕೊ ಎ ಪೋಕೊ ತಂಡದ ಕಲಾವಿದರು ಗಾಯನ ಪ್ರಸ್ತುತಪಡಿಸಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ಡೊಂಗರಕೇರಿಯ ಕೆನರಾ ಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಶನಿವಾರ ನಡೆದ ‘ಪಾಸಿಟಿವ್‌ ವೈಬ್ಸ್‌’ ಸಂಗೀತ ಸಂಜೆಯಲ್ಲಿ ಗಾಯಕಿ, ಸಂಗೀತ ಸಂಯೋಜಕಿ ಶುಬಿರಾ ಡೆಸಾ ನೇತೃತ್ವದ ಪೋಕೊ ಎ ಪೋಕೊ ತಂಡದ ಕಲಾವಿದರು ತರಹೇವಾರಿ ಗೀತೆಗಳ ಮೂಲಕ ಕೇಳುಗರ ಮನ ತಣಿಸಿದರು.

ಇಂಗ್ಲಿಷ್‌, ಹಿಂದಿ, ಜಪಾನಿ ಸೇರಿದಂತೆ ಹಲವು ಭಾಷೆಗಳ ಗೀತೆಗಳನ್ನು ಪೋಕೊ ಎ ಪೋಕೊ ತಂಡದ ಗಾಯಕರು ಪ್ರಸ್ತುತಪಡಿಸಿದರು. ರಾಕ್‌ ಸಂಗೀತ, ಮಕ್ಕಳ ಹಾಡುಗಳು ಸೇರಿದಂತೆ ವಿವಿಧ ವರ್ಗದ ಕೇಳುಗರನ್ನು ಗಮನದಲ್ಲಿ ಇರಿಸಿಕೊಂಡು ಹಲವು ಬಗೆಯ ಹಾಡುಗಳನ್ನು ಹಾಡಿದರು. ಹಾಡಿನೊಂದಿಗೆ ಹರಿದುಬಂದ ಪಕ್ಕವಾದ್ಯದ ಇಂಪಾದ ಸಂಗೀತ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

ಮಧ್ಯಾಹ್ನದ 3.30 ಮತ್ತು ಸಂಜೆ 6ರಿಂದ ಪ್ರತ್ಯೇಕವಾಗಿ ಎರಡು ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಪಾಶ್ಚಿಮಾತ್ಯ, ದೇಶೀಯ ಸೇರಿದಂತೆ ಹಲವು ಸಂಗೀತ ಪ್ರಾಕಾರಗಳನ್ನು ಒಂದೇ ಕಾರ್ಯಕ್ರಮದಲ್ಲಿ ಆಸ್ವಾದಿಸುವ ಅವಕಾಶವಿತ್ತು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಗೀತದ ಸವಿಯನ್ನು ಸವಿದರು.

ADVERTISEMENT

ಚೆರ್ರಿ ಬ್ಲಾಸಂ ಹೂಗಳ ಸೊಬಗನ್ನು ಬಣ್ಣಿಸುವ ‘ಸಾಕುರಾ...’, ಮತ್ತಷ್ಟು ಮುತ್ತಿಕ್ಕು ಎಂದು ಪ್ರೇಯಸಿಯನ್ನು ಮನವೊಲಿಸುವ ‘ಸಾಮೇ ಮುಚೋ...’ ಜಪಾನಿ ಭಾಷೆಯ ಗೀತೆಗಳಿಗೆ ದನಿಯಾದ ಕಲಾವಿದರ ತಂಡಕ್ಕೆ ಪ್ರೇಕ್ಷಕ ವರ್ಗ ಚಪ್ಪಾಳೆಯ ಮೆಚ್ಚುಗೆ ನೀಡಿತು. ‘ಜೋ ಬಟ್ಕೆ’ ಹಿಂದಿ ಗೀತೆಯನ್ನು ಈ ತಂಡ ಹೊಸ ಶೈಲಿಯಲ್ಲಿ ಪ್ರಸ್ತುತಪಡಿಸಿದಾಗ ಸಭಾಂಗಣದೊಳಗೆ ಕರತಾಡನದ ಜೊತೆಯಲ್ಲೇ ಶಿಳ್ಳೆ, ಹರ್ಷೋದ್ಘಾರವೂ ಕೇಳಿಬಂತು.

ಆಕರ್ಷಕ ಉಡುಗೆ ತೊಟ್ಟು ವೇದಿಕೆಗೆ ಬಂದ ಚಿಕ್ಕ ಮಕ್ಕಳ ಗಾಯನವಂತೂ ಪ್ರೇಕ್ಷಕ ವರ್ಗವನ್ನು ಸಂತಸದ ಅಲೆಯಲ್ಲಿ ತೇಲಿಸಿತು. ಪಿಯಾನಿಕಾ ವಾದನದ ಮೂಲಕ ಗೀತಗಾಯನ, ವಯೊಲಿನ್‌, ಕೀ ಬೋರ್ಡ್‌ ವಾದಕರನ್ನು ಆಗಾಗ ಬದಲಿಸಿದ ತಂಡ ನಿರ್ದೇಶಕಿ ಶುಬಿರಾ, ಬಹುತೇಕ ಕಲಾವಿದರ ಬಹುಮುಖ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿದರು.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿರುವವರು, ವಿದ್ಯಾರ್ಥಿಗಳು ಸೇರಿದಂತೆ ಹಲವು ರಂಗಗಳಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು ‘ಪೋಕೊ ಎ ಪೋಕೊಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮ ಮಂಗಳೂರಿಗರಿಗೆ ಹೊಸ ಅನುಭವ ನೀಡಿತು.

‘ಇಡೀ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿಬಂದಿತು. ಎಳೆಯ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲರನ್ನೂ ಎರಡು ಗಂಟೆಗಳ ಕಾಲ ಹಿಡಿದಿಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ಯಾವ ಹಂತದಲ್ಲೂ ಕಾರ್ಯಕ್ರಮ ನೀರಸ ಎನಿಸಲಿಲ್ಲ. ಮತ್ತೊಮ್ಮೆ ಈ ತಂಡದ ಪ್ರದರ್ಶನ ಇದ್ದರೆ ಕಂಡಿತ ಬಂದು, ಗಾಯನ ಆಸ್ವಾದಿಸುತ್ತೇವೆ’ ಎಂದು ಶನಿವಾರ ಸಂಗೀತ ಸಂಜೆಗೆ ಬಂದಿದ್ದ ರವಿ ಮತ್ತು ಕೆರ್ಲಿನ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.