ADVERTISEMENT

19ರಂದು ನಬಾರ್ಡ್ ತಂಡ ಭೇಟಿ: ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 5:24 IST
Last Updated 17 ಮಾರ್ಚ್ 2021, 5:24 IST
ರಾಜೇಂದ್ರ ಕುಮಾರ್‌
ರಾಜೇಂದ್ರ ಕುಮಾರ್‌   

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಅನೇಕ ಸಾಧನೆಗಳನ್ನು ಮಾಡಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿದೆ. ಜಿಲ್ಲೆಯ ಸಹಕಾರ ಸಂಘಗಳ ಆರ್ಥಿಕ ಸ್ಥಿತಿಗತಿ, ಸಾಧನೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲು ನಬಾರ್ಡ್ ನಿಯೋಜಿತ ಅಧ್ಯಯನ ತಂಡ ಇದೇ 19ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ (ಎಸ್‍ಸಿಡಿಸಿಸಿ ಬ್ಯಾಂಕ್) ಭೇಟಿ ನೀಡಲಿದೆ ಎಂದು ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬೆಳ್ಳಿ ಪ್ರಕಾಶ್ ನೇತೃತ್ವದ ಅಧ್ಯಯನ ತಂಡವು ಎರಡು ದಿನ ಡಿಸಿಸಿ ಬ್ಯಾಂಕ್ ಸೇರಿದಂತೆ ಅವಿಭಜಿತ ಜಿಲ್ಲೆಯ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಸ್ವ ಸಹಾಯ ಸಂಘಗಳ ಕಾರ್ಯನಿರ್ವಹಣೆಯ ಬಗ್ಗೆ ಅಧ್ಯಯನ ನಡೆಸಲಿದೆ. ರಾಜ್ಯದ ವಿವಿಧ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಅಧ್ಯಕ್ಷರು/ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರು ಸೇರಿದಂತೆ 24 ಮಂದಿ ತಂಡದಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ.

ಎಸ್‌ಸಿಡಿಸಿಸಿ ಬ್ಯಾಂಕಿನ ವ್ಯವಹಾರ ಚಟುವಟಿಕೆಗಳ ವೈವಿದ್ಯೀಕರಣ, ಕ್ರೆಡಿಟ್ ಮಾನಿಟರಿಂಗ್, ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣ ಹಾಗೂ ಕೃಷಿ ಸಾಲ ಮರುಪಾವತಿಯಲ್ಲಿ 25 ವರ್ಷಗಳಿಂದ ಶೇ 100ರ ಸಾಧನೆ ಮುಂತಾದ ಪ್ರಮುಖ ವಿಷಯಗಳ ಬಗ್ಗೆಯೂ ತಂಡ ಮಾಹಿತಿ ಪಡೆಯಲಿದೆ. ನಂತರ ಸಿದ್ಧಿ ವಿನಾಯಕ ಸ್ವಸಹಾಯ ಸಂಘ, ವಿಘ್ನೇಶ್ವರ ಸ್ವಸಹಾಯ ಸಂಘ ಹಾಗೂ ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಂಘಗಳಿಗೆ ಭೇಟಿ ನೀಡಲಿದೆ.

ADVERTISEMENT

20ರಂದು ಬಂಟ್ವಾಳ ತಾಲ್ಲೂಕಿನ ಇಡ್ಕಿದು ವ್ಯವಸಾಯ ಸೇವಾ ಸಹಕಾರಿ ಸಂಘ, ಪುತ್ತೂರು ತಾಲ್ಲೂಕಿನ ಕಾವು ವ್ಯವಸಾಯ ಸೇವಾ ಸಹಕಾರಿ ಸಂಘ, ಎಸ್‍ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆ, ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘ, ಉಡುಪಿ ತಾಲ್ಲೂಕಿನ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ, ಕಾಪು ನಾಗಸನ್ನಿಧಿ ಸ್ವಸಹಾಯ ಸಂಘಗಳ ಕಾರ್ಯ ನಿರ್ವಹ ಣೆಯ ಬಗ್ಗೆ ತಂಡದ ಸದಸ್ಯರು ಮಾಹಿತಿ ಪಡೆಯುವರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.