ADVERTISEMENT

ನಾಗಬನ ಧ್ವಂಸ: ಮತ್ತಷ್ಟು ಮಂದಿ ಇರುವ ಶಂಕೆ

ಘಟನೆಗೆ ಕುಮ್ಮಕ್ಕು ನೀಡಿದವರನ್ನೂ ಬಂಧಿಸಿ: ಶಾಸಕ ಭರತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:37 IST
Last Updated 27 ನವೆಂಬರ್ 2021, 13:37 IST

ಮಂಗಳೂರು: ‘ಕೋಡಿಕಲ್ ಮತ್ತು ಕೂಳೂರು ನಾಗಬನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇದರ ಹಿಂದೆ ಇನ್ನೂ ಹಲವರು ಭಾಗಿ ಇಗಿರುವ ಶಂಕೆ ಇದೆ. ಘಟನೆಗೆ ಕುಮ್ಮಕ್ಕು ನೀಡಿದ ಆರೋಪಿಗಳನ್ನು ಕೂಡ ಪೊಲೀಸರು ಶೀಘ್ರವೇ ಬಂಧಿಸುವಂತೆ ಶಾಸಕ ಡಾ.ವೈ.ಭರತ್ ಶೆಟ್ಟಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪೊಲೀಸರ ಸತತ ಕಾರ್ಯಾಚರಣೆ ಮೂಲಕ ಎಂಟು ಮಂದಿ ಬಂಧಿಸಿರುವುದು ಶ್ಲಾಘನೀಯ. ಅವರ ಕಾರ್ಯವನ್ನು ಅಭಿನಂದಿಸುತ್ತೇನೆ. ಆದರೆ, ಇದರ ಹಿಂದೆ ಇನ್ನೂ ಹಲವರು ಇದ್ದಾರೆ ಎಂಬ ಅನುಮಾನ ಇದೆ. ರಾಜಕೀಯ ಪಕ್ಷವೊಂದಕ್ಕೆ ಸೇರಿದ ವ್ಯಕ್ತಿಯೊಬ್ಬರ ಕೈವಾಡ ಇರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದರು.

ಧಾರ್ಮಿಕ ಭಾವನೆ ಕೆರಳಿಸುವ ಕೃತ್ಯಗಳು ಸತತವಾಗಿ ನಡೆದರೂ, ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಟ್ಟು ಜನತೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ. ಘಟನೆಗಳು ನಡೆದಾಗ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಮತ್ತು ನಾಗಬನದ ಭಕ್ತರು ಉದ್ವಿಗ್ನ ಸ್ಥಿತಿಯ ವಾತಾವರಣ ಉಂಟು ಮಾಡದೆ ಶಾಂತಿಯುತ ಪ್ರತಿಭಟಿಸಿದ್ದಾರೆ. ಪೊಲೀಸರು ಕೂಡ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಇದರ ರೂವಾರಿಗಳನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು. ಅಲ್ಲದೆ ತಮ್ಮ ಪಕ್ಷಕ್ಕೆ ಕುಂದುಂಟಾಗುವ ರೀತಿಯಲ್ಲಿ ಹುನ್ನಾರ ಮಾಡಿ, ಪದೇ ಪದೇ ಇಂತಹ ಘಟನೆಗಳನ್ನು ಮಾಡಿಸಿರುವುದರ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಒತ್ತಾಯಿಸಿದರು.

ADVERTISEMENT

ಉಪಮೇಯರ್ ಸುಮಂಗಲಾ ರಾವ್, ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.