ADVERTISEMENT

ಪಕ್ಷಾಂತರಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಆಕ್ಷೇಪ: ಕಟೀಲ್‌ಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 12:41 IST
Last Updated 11 ಮೇ 2022, 12:41 IST
ನಳಿನ್‌ಕುಮಾರ್ ಕಟೀಲ್
ನಳಿನ್‌ಕುಮಾರ್ ಕಟೀಲ್    

ಮಂಗಳೂರು: ಪಕ್ಷ ಅಧಿಕಾರ ಹಿಡಿಯಲು ಆಪರೇಶನ್ ಕಮಲ ಅನಿವಾರ್ಯ ಎಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿಕೆಗೆ ಬಿಜೆಪಿ ಶಕ್ತಿ ಕೇಂದ್ರವಾಗಿರುವ ಕರಾವಳಿಯ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಾರ್ಯಕರ್ತರು ನಳಿನ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ನಳಿನ್‌ಕುಮಾರ್ ಕಟೀಲರೇ ಹಾಗಾದ್ರೆ ನಾವು ಇಷ್ಟು ವರ್ಷಗಳಿಂದ ನಮ್ಮ ಕೆಲಸ ಕಾರ್ಯಗಳನ್ನೆಲ್ಲ ಬದಿಗಿಟ್ಟು ಪಕ್ಷಕ್ಕಾಗಿ, ಸಂಘಟನೆಗಾಗಿ ದುಡಿದ್ದು ವೇಸ್ಟ್ ಆಯ್ತ..!?’ ಎಂದು ಜಯಾನಂದ ಬಂಗೇರ ಪ್ರಶ್ನಿಸಿದರೆ, ‘ಇಷ್ಟರವರೆಗೆ ದುಡಿದ ಕಾರ್ಯಕರ್ತರ ಸ್ಥಿತಿ ಅಯೋಮಯ’ ಎಂದು ರಾಧಾಕೃಷ್ಣ ರಾವ್ ಟೀಕಿಸಿದ್ದಾರೆ.

‘ಮುಂಬರುವ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು, ಅಧಿಕಾರದ ಆಸೆಯಿಂದಲೇ ತಮ್ಮ ಪಕ್ಷ ತೊರೆದು ಬರುವವರನ್ನು ಸೇರಿಸಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ಪಕ್ಷದ ಬಗ್ಗೆ ಯಾಕೋ ಅಸಹ್ಯ ಹುಟ್ಟುತ್ತಿದೆ’ ಎಂದು ರಾಮಕಿಶೋರ್ ಶಾಸ್ತ್ರಿ ಹೇಳಿಕೊಂಡಿದ್ದಾರೆ.

ADVERTISEMENT

‘ಅಧಿಕಾರ ಹಿಡಿಯಬೇಕೆನ್ನುವ ಕಾರಣಕ್ಕಾಗಿ ಭಾಜಪದ ಗಂಧ–ಗಾಳಿ ಗೊತ್ತಿಲ್ಲದ, ಹಾದಿ ಬೀದಿಯಲ್ಲಿರುವ ಬೆರಕೆಗಳನ್ನೆಲ್ಲ ಸೇರಿಸಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗೊತ್ತಿ ಭಾಜಪಾ ಸತ್ವಹೀನವಾಗಿದೆ’ ಎಂದು ಸುಬ್ರಹ್ಮಣ್ಯ ಕೆಎಲ್ ಬರೆದಿದ್ದಾರೆ. ‘ಅಕ್ಬರುದ್ದೀನ್ ಓವೈಸಿ ಬಿಜೆಪಿ ಸೇರಿದರೆ ಸ್ವಾಗತ ಆಶ್ಚರ್ಯಪಡಬೇಡಿ, ಮುಂದೊಂದು ದಿನ ಸೇರಲೂಬಹುದು’ ಎಂದು ಸುನಿಲ್ ಬಜಿಲ್‌ಕೇರಿ ಪೋಸ್ಟ್ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದ ಕೆಲವು ಕಾರ್ಯಕರ್ತರು ಆಮ್‌ ಆದ್ಮಿ ಪಕ್ಷ ಸೇರುವ ಬಗ್ಗೆ ಆಸಕ್ತಿ ತೋರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.