ADVERTISEMENT

ಇಂದಿನಿಂದ 'ನಂದಿನಿ ಸಿಹಿ ಉತ್ಸವ’

ಹಾಲು ಒಕ್ಕೂಟ: ‘ನಂದಿನಿ ಚೀಸ್’, ‘ಶ್ರೀಖಂಡ್’ ಮಾರುಕಟ್ಟೆಗೆ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:44 IST
Last Updated 23 ಡಿಸೆಂಬರ್ 2019, 13:44 IST
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸೋಮವಾರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ‘ನಂದಿನಿ ಚೀಸ್’ ಅನ್ನು ಬಿಡುಗಡೆ ಮಾಡಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸೋಮವಾರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ‘ನಂದಿನಿ ಚೀಸ್’ ಅನ್ನು ಬಿಡುಗಡೆ ಮಾಡಿದರು.   

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗ ದೊಂದಿಗೆ ‘ನಂದಿನಿ ಚೀಸ್’ ಮತ್ತು ‘ನಂದಿನಿ ಶ್ರೀಖಂಡ್’ ಎಂಬ ಹೊಸ ಉತ್ಪನ್ನವನ್ನು ಮಂಗಳವಾರ (ಡಿ.24ರಂದು) ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವ ಜತೆಗೆ ಇದೇ 24ರಿಂದ ಜನವರಿ 2ರ ವರೆಗೆ ನಂದಿನಿ ಸಿಹಿ ಉತ್ಸವವನ್ನು ಒಕ್ಕೂಟ ಹಮ್ಮಿಕೊಂಡಿದೆ. ಡಿ.24 ರಾಷ್ಟ್ರೀಯ ಗ್ರಾಹಕರ ದಿನವಾಗಿದ್ದು ಆ ಸವಿನೆನಪಿಗಾಗಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಪ್ರಯುಕ್ತ ನಂದಿನಿಯ 26 ಸಿಹಿ ಉತ್ಪನ್ನಗಳನ್ನು ಶೇ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ವಾರದ ಅವಧಿಯಲ್ಲಿ ನಂದಿನಿಯ ಮಳಿಗೆಗಳಲ್ಲಿ ಉತ್ಪನ್ನಗಳು ಲಭ್ಯವಿದ್ದು, ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನಂದಿನಿ ಚೀಸ್‌ ಅತ್ಯುತ್ತಮ ಹಾಲಿನ ಉತ್ಪನ್ನವಾಗಿದ್ದು, ಅದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಹೇರಳವಾಗಿದೆ. ಹಲ್ಲುಗಳು ಹಾಗೂ ಸ್ನಾಯುಗಳನ್ನು ಬಲಪಡಿಸಲು ಇದು ಸಹಕಾರಿ. ಅಲ್ಲದೆ, ಕೀಲು ನೋವು, ಮೂಳೆಸವೆತ, ಮೈಗ್ರೇನ್ ತಡೆಗಟ್ಟುತ್ತದೆ. ದೇಹದ ತೂಕ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಚೆಡ್ಡಾರ್‌ ಚೀಸ್‌, ಮೊಹರೆಲ್ಲಾ ಚೀಸ್‌, ಪ್ರೊಸಸ್ಡ್‌ ಚೀಸ್‌, ಸ್ಪ್ರೆಡ್‌ ಚೀಸ್‌ ಸೇರಿದಂತೆ ವಿವಿಧ ಮಾದರಿಯ ಚೀಸ್‌ಗಳನ್ನು ಕೆಎಂಎಫ್‌ನ ಸಹಕಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. 100 ಗ್ರಾಂ, 200 ಗ್ರಾಂ, 1 ಕೆಜಿ ಪ್ಯಾಕ್‍ಗಳಲ್ಲಿ ಲಭ್ಯವಿದೆ. ಆರಂಭಿಕವಾಗಿ ಶೇ 5ರಷ್ಟು ದರದಲ್ಲಿ ರಿಯಾಯಿತಿ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ನಂದಿನಿ ಶ್ರೀಖಂಡ್‌ ಎಂಬ ವಿನೂತನ ಉತ್ಪನ್ನವನ್ನುವಿಜಾಪುರ ಹಾಲು ಒಕ್ಕೂಟದ ಸಹಕಾರದಲ್ಲಿ ಮಾರುಕಟ್ಟೆಗೆ ಪರಿಚಯಿಸ ಲಾಗುತ್ತಿದ್ದು, ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಹಲ್ಲು ಮತ್ತು ಮೂಳೆಗಳ ಆರೋಗ್ಯಕ್ಕೆ, ಜೀರ್ಣಕ್ರಿಯೆಗೆ, ಸುಖ ನಿದ್ರೆಗೆ, ದೇಹವನ್ನು ತಂಪಾಗಿಡಲು, ಕೂದಲ ಬೆಳವಣಿಗೆಗೆ ಹಾಗೂ ಚರ್ಮದ ಹೊಳಪಿಗೆ ಸಹಕಾರಿ. ಇದು ಮ್ಯಾಂಗೋ ಹಾಗೂ ಏಲಕ್ಕಿ ಸ್ವಾದದಲ್ಲಿ ಲಭ್ಯವಿದೆ. ಇದು 100 ಗ್ರಾ, 200 ಗ್ರಾ ಹಾಗೂ 400 ಗ್ರಾಂ ಪ್ಯಾಕ್‍ನಲ್ಲಿ ಲಭ್ಯ’ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ನಿರ್ದೇಶಕರಾದ ಬಿ.ನಿರಂಜನ್, ಎ.ಜಗದೀಶ ಕಾರಂತ, ಕೆ.ಪಿ.ಸುಚರಿತ ಶೆಟ್ಟಿ, ಎಸ್.ಬಿ.ಜಯರಾಮ ರೈ, ನರಸಿಂಹ ಕಾಮತ್, ಬಿ. ಸುಧಾಕರ ರೈ, ಸುಭದ್ರ ರಾವ್, ಸವಿತಾ ಎನ್. ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಹೆಗ್ಡೆ, ಡಾ.ನಿತ್ಯಾನಂದ ಭಕ್ತ, ಟಿ. ಲಕ್ಕಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.