
ನಾರಾಯಣ ಗುರು ಜಯಂತಿ
ಪ್ರಜಾವಾಣಿ ಚಿತ್ರ
ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ದೇವರಮೂರ್ತಿ ಪ್ರತಿಷ್ಠಾಪಿಸಿದ ಸ್ಮರಣಾರ್ಥ 2026ರ ಫೆ.21ರಂದು ಮಂಗಳೂರಿನಲ್ಲಿ ‘ಶ್ರೀಗುರು ಸಮಾವೇಶ’ ಏರ್ಪಡಿಸ
ಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಗುರುಗಳು 1912ರ ಫೆಬ್ರುವರಿ 21ರಂದು ಮೂರ್ತಿ ಪ್ರತಿಷ್ಠಾಪಿಸಿ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದ್ದರು. ಆ ಕ್ರಾಂತಿಕಾರಿ ನಿರ್ಧಾರದಿಂದ ಇಂದು ಹಿಂದುಳಿದ ವರ್ಗದ ಜನರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಇದನ್ನು ಸ್ಮರಿಸುವುದು ಸಮಾವೇಶದ ಉದ್ದೇಶ. ನಾರಾಯಣ ಗುರುಗಳ ಅನುಯಾಯಿಗಳು, ಹಿಂದುಳಿದ ವರ್ಗಗಳ ನಾಯಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ’ ಎಂದರು.
ಕಂಕನಾಡಿ ಗರಡಿ ಕ್ಷೇತ್ರ, ಗೆಜ್ಜೆಗಿರಿ ಕ್ಷೇತ್ರ, ಕಟಪಾಡಿ ವಿಶ್ವನಾಥ ದೇವಸ್ಥಾನ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ, ಅಖಿಲ ಭಾರತ ಬಿಲ್ಲವರ ಯೂನಿಯನ್, ಗೋಕರ್ಣನಾಥ ಬ್ಯಾಂಕ್, ಭಾರತ್ ಬ್ಯಾಂಕ್, ಗುರುದೇವ ಬ್ಯಾಂಕ್, ಆತ್ಮಶಕ್ತಿ ಬ್ಯಾಂಕ್, ಮೂರ್ತೆದಾರರ ಸಹಕಾರಿ ಸಂಘ ಹಾಗೂ ವಿವಿಧ ರಾಜ್ಯ, ವಿದೇಶಗಳಲ್ಲಿರುವ ನಾರಾಯಣ ಗುರು ಸಂಘ– ಬಿಲ್ಲವ ಸಂಘಗಳು ಸೇರಿದಂತೆ ಸುಮಾರು 276 ಸಂಘ ಸಂಸ್ಥೆಗಳು ಸಮಾವೇಶದ ನೇತೃತ್ವ ವಹಿಸಲಿವೆ ಎಂದೂ ಅವರು ತಿಳಿಸಿದರು.
ಒಂದು ಜಾತಿಗೆ ಸೀಮಿತಗೊಳಿಸದೆ, ನಾರಾಯಣಗುರುಗಳ ಎಲ್ಲ ಅನುಯಾಯಿಗಳನ್ನು ಸೇರಿಸಿಕೊಂಡು ಈ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.