ADVERTISEMENT

ದಕ್ಷಿಣ ಕನ್ನಡ, ಉಡುಪಿಯ ಪ್ರತಿ ಗ್ರಾಮಗಳಲ್ಲಿ ನಾರಾಯಣಗುರು ಶಕ್ತಿಪೀಠದ ಸಮಿತಿ ರಚನೆ

ಯುವ ಜನರ ಮನಃಪರಿವರ್ತನೆಯ ಉದ್ದೇಶ: ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 11:04 IST
Last Updated 16 ಫೆಬ್ರುವರಿ 2023, 11:04 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸೇರಿ 26 ಜಾತಿಗಳ ಶ್ರೇಯೋಭಿವೃದ್ಧಿಗೆ ನಡೆಸುತ್ತಿರುವ ಹೋರಾಟದ ಮುಂದಿನ ಭಾಗವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತಿ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಸಮಿತಿ ರಚಿಸಿ, ಯುವಜನರ ಮನಃಪರಿವರ್ತನೆಗೆ ಕಾರ್ಯಕ್ರಮ ರೂಪಿಸಲು ಯೋಚಿಸಲಾಗಿದೆ ಎಂದು ಕಲಬುರಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೇಡಿಕೆ ಈಡೇರಿಕೆಗಾಗಿ ನಡೆಸಿದ ಪಾದಯಾತ್ರೆಗೆ ಯಶಸ್ಸು ದೊರೆತಿದ್ದು, ಫೆ.14ರಂದು ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಬಿಲ್ಲವರ ಎಲ್ಲ ಬೇಡಿಕೆಗಳನ್ನು ಪರಿಗಣಿಸುವ ಭರವಸೆ ನೀಡಿದ್ದಾರೆ. ಹಾಗಾಗಿ, ಉಪವಾಸ ಸತ್ಯಾಗ್ರಹ ಕೈಬಿಡಲಾಗಿದೆ. ಸಮುದಾಯ ಜಾಗೃತಿಯ ಮುಂದುವರಿದ ಭಾಗವಾಗಿ ಗ್ರಾಮೀಣ ಮಟ್ಟದಲ್ಲಿ, ವಿಶೇಷವಾಗಿ ಯುವಜನರಲ್ಲಿ ನಾರಾಯಣಗುರುಗಳ ತತ್ವದ ಅರಿವು ಮೂಡಿಸಬೇಕಾಗಿದೆ. ಧರ್ಮ ರಾಜಕಾರಣ, ದ್ವೇಷ ರಾಜಕಾರಣದ ಹತ್ಯೆಗಳು ಕೊನೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಎಲ್ಲ ಬಿಲ್ಲವ ಸಂಘಟನೆಗಳ ಪ್ರಮುಖರು, ಗರಡಿಗಳ ಮುಖ್ಯಸ್ಥರ ಸಭೆ ಕರೆದು ಜಿಲ್ಲೆ, ತಾಲ್ಲೂಕು, ಗ್ರಾಮ ಮಟ್ಟದ ಕಾರ್ಯಕ್ರಮಗಳ ರೂಪರೇಷೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.