ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್‌ನ ಇನಾಯತ್ ಅಲಿಗೆ ದೆಹಲಿ ಪೊಲೀಸರ ನೋಟಿಸ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 13:02 IST
Last Updated 7 ಡಿಸೆಂಬರ್ 2025, 13:02 IST
ಇನಾಯತ್ ಅಲಿ (ಮಂಗಳೂರು ಉತ್ತರ: ಕಾಂಗ್ರೆಸ್‌)
ಇನಾಯತ್ ಅಲಿ (ಮಂಗಳೂರು ಉತ್ತರ: ಕಾಂಗ್ರೆಸ್‌)   

ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಯ ಭಾಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಂಗಳೂರಿನ ಇನಾಯತ್ ಅಲಿ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ ಸುರೇಶ್ ಅವರಿಗೂ ಶುಕ್ರವಾರ ನೋಟಿಸ್ ಜಾರಿ ಮಾಡಲಾಗಿತ್ತು.

ಮಂಗಳೂರಿನ ಸುರತ್ಕಲ್‌ನಲ್ಲಿರುವ ಇನಾಯತ್ ಅಲಿ ಅವರ ಮನೆಗೆ ಶುಕ್ರವಾರ ಬಂದಿರುವ ಆರ್ಥಿಕ ಅಪರಾಧ ವಿಭಾಗಗಳ ಪೊಲೀಸರು ನೋಟಿಸ್ ಕೊಟ್ಟು ಹೋಗಿದ್ದಾರೆ. ಅವರ ಕಂಪನಿ ಓಷಿಯನ್ ಕನ್‌ಸ್ಟ್ರಕ್ಷನ್ಸ್‌ ಹೆಸರಿನಲ್ಲಿ ನೋಟಿಸ್ ಇದ್ದು ಒಂದು ವಾರದೊಳಗೆ ಖುದ್ದು ಹಾಜರಾಗಿ ಉತ್ತರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಇನಾಯತ್ ‘ನ್ಯಾಷನಲ್ ಹೆರಾಲ್ಡ್‌ ಪ್ರಕರಣದ ತನಿಖೆ ನಡೆಯುತ್ತಿದ್ದಾಗ ನಾನು ಮತ್ತು ಸಹೋದರ ನಡೆಸುತ್ತಿರುವ ಕಂಪನಿಯ ಆರ್ಥಿಕ ವ್ಯವಹಾರದ ಮಾಹಿತಿ ನೀಡುವಂತೆ 2016ರಲ್ಲಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿತ್ತು. ಅದರ ಮುಂದುವರಿಕೆಯಾಗಿ ಈಗ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸ್ಯಾಮ್ ಪಿತ್ರೋಡ ಮುಂತಾದ ನಾಯಕರಲ್ಲದೆ ಯಂಗ್ ಇಂಡಿಯಾ ಕಂಪನಿ ಮತ್ತು ಕೆಲವು ರಾಜಕೀಯ ವ್ಯಕ್ತಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ 2014ರಲ್ಲಿ ದಾಖಲಿಸಿದ ಖಾಸಗಿ ದೂರಿನಲ್ಲಿ ತಿಳಿಸಲಾಗಿತ್ತು.

ಡಿ.ಕೆ ಶಿವಕುಮಾರ್ ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ಇನಾಯತ್ ಅಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಬಿಜೆಪಿಯ ಡಾ.ವೈ ಭರತ್ ಶೆಟ್ಟಿ ಚುನಾವಣೆಯಲ್ಲಿ ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.