ADVERTISEMENT

ಬತ್ತಿದ ನೇತ್ರಾವತಿ ಒಡಲು; ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:09 IST
Last Updated 13 ಏಪ್ರಿಲ್ 2024, 7:09 IST
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿ ಕೆಲವೆಡೆ ಬರಿದಾಗಿ ಕಾಣುತ್ತಿದೆ
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿ ಕೆಲವೆಡೆ ಬರಿದಾಗಿ ಕಾಣುತ್ತಿದೆ   

ಬಂಟ್ವಾಳ: ಪ್ರತಿ ವರ್ಷ ಇಲ್ಲಿನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಕಡೇ ಚೆಂಡು ಅಥವಾ ಮರುದಿನ ನಡೆಯುವ ಮಹಾರಥೋತ್ಸವಕ್ಕೆ ಒಂದೆರಡು ಹನಿಯಾದರೂ ಬರುತ್ತಿದ್ದ ಮಳೆ ಈ ಬಾರಿ ಒಂದು ಹನಿಯೂ ಬಿದ್ದಿಲ್ಲ. ಆದರೆ, ಸೆಖೆ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿ ಹರಿಯುತ್ತಿದ್ದು, ಜಿಲ್ಲೆಯಲ್ಲೇ ಗರಿಷ್ಠ ಪ್ರಮಾಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಶಂಭೂರು ಎಎಂಆರ್ ಜಲವಿದ್ಯುತ್ ಘಟಕದ ಅಣೆಕಟ್ಟೆಯಿಂದ ನೀರು ಹರಿಯ ಬಿಡಲಾಗಿದೆ. ಇದರಿಂದಾಗಿ ಪಾಣೆಮಂಗಳೂರು ಪರಿಸರದಲ್ಲಿ ಹಾದು ಹೋಗಿರುವ ನೇತ್ರಾವತಿ ನದಿಯ ಕೆಲವೆಡೆ ನೀರಿಲ್ಲದೆ ಬರಿದಾಗಿ ಮರಳು ಮತ್ತು ಬಂಡೆಕಲ್ಲು ಕಾಣುತ್ತಿದೆ.

ಇದರಿಂದಾಗಿ 6 ಮೀ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 4.88 ಮೀಟರ್‌ನಿಂದ 5.63 ಮೀಟರ್‌ಗೆ ಏರಿಕೆಯಾಗಿದೆ.

ADVERTISEMENT

ಇಲ್ಲಿನ ಸರಪಾಡಿ, ಅಜಿಲಮೊಗರು, ನರಿಕೊಂಬು, ಕಡೇಶ್ವಾಲ್ಯ, ಬರಿಮಾರಿನಲ್ಲಿ ನೇತ್ರಾವತಿ ನದಿ ಬರಿದಾಗಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೂ ನೀರಿನ ಕೊರತೆ ಕಾಡುತ್ತಿದೆ.

ಕಡೇಶ್ವಾಲ್ಯ ಅಜಿಲಮೊಗರು ನಡುವೆ ನಿರ್ಮಾಣಗೊಳ್ಳುತ್ತಿರುವ ಸೌಹಾರ್ದ ಸೇತುವೆ ನಿರ್ಮಾಣ ಕಾಮಗಾರಿಗೆ ಪಿಲ್ಲರ್ ನಿರ್ಮಾಣಕ್ಕೆ ಅನುಕೂಲಕರವಾಗಿದೆ ಎಂಬ ಅಭಿಪ್ರಾಯವೂ ಸ್ಥಳೀಯರಿಂದ ವ್ಯಕ್ತವಾಗಿದೆ.

ಬಿಳಿಯೂರು ಮತ್ತು ಜಕ್ರಿಬೆಟ್ಟು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿದ ನೂತನ ಕಿಂಡಿ ಅಣೆಕಟ್ಟೆಯಿಂದಲೂ ಬಹುಗ್ರಾಮ ಕುಡಿಯುವ ನೀರು ಮತ್ತು ತುಂಬೆ ಅಣೆಕಟ್ಟೆಗೆ ಅನುಕೂಲಕರವಾಗಿದೆ ಎಂಬ ಮಾತು ಕೃಷಿಕರಿಂದ ವ್ಯಕ್ತವಾಗಿದೆ. ಈ ಪೈಕಿ ಬಿಳಿಯೂರು ಕಿಂಡಿ ಅಣೆಕಟ್ಟೆ ಕಾಮಗಾರಿ ಪೂರ್ಣಗೊಂಡು ನೀರು ಸಂಗ್ರಹಗೊಂಡಿದ್ದರೆ, ಜಕ್ರಿಬೆಟ್ಟು ಕಿಂಡಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಕಾಮಗಾರಿಯೂ ಪೂರ್ಣಗೊಂಡರೆ ನರಿಕೊಂಬು ಮತ್ತು ಶಂಭೂರು ಗ್ರಾಮದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೃಷಿಕ ಯೋಗೀಶ ಪೊಯ್ತಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ ನೇತ್ರಾವತಿ ನದಿಯಿಂದ ಕೃಷಿಕರು ಪಂಪ್ ಮೂಲಕ ನೀರು ಮೇಲೆತ್ತಲು ಯಾವುದೇ ರೀತಿಯ ಅಡ್ಡಿ ಉಂಟು ಮಾಡಕೂಡದು ಎಂದು ಆಗ್ರಹಿಸಿ ಇಲ್ಲಿನ ರೈತ ಸಂಘ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಪ್ರತಿಕ್ರಿಯಿಸಿದ್ದಾರೆ.

ಬಂಟ್ವಾಳ ತಾಲ್ಲೂಕಿನ ತುಂಬೆ ಅಣೆಕಟ್ಟೆಯಲ್ಲಿ 5 ಅಡಿ ನೀರು ಸಂಗ್ರಹಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.