ಮಂಗಳೂರು: ಮಂಗಳವಾರ ರಾತ್ರಿ ಗಡಿಯಾರದ ಸಣ್ಣ ಮುಳ್ಳು ಹಾಗೂ ದೊಡ್ಡ ಮುಳ್ಳುಗಳೆರಡೂ ಅಂಕಿ 12ರಲ್ಲಿ ಒಂದಾಗುತ್ತಿದ್ದಂತೆ ನಗರದೆಲ್ಲೆಡೆ ಕೇಕೆಯ ಸದ್ದು ಮುಗಿಲುಮುಟ್ಟಿತ್ತು. ಹೊಸ ವರ್ಷದ ಶುಭಾಶಯ ಕೋರುತ್ತಲೇ 2025ನೇ ಇಸವಿಯ ಮೊದಲ ಕ್ಷಣವನ್ನು ಸಡಗರದಿಂದ ಬರಮಾಡಿಕೊಂಡರು.
ಹೊಸ ವರುಷವನ್ನು ಹರುಷದಿಂದ ಬರಮಾಡಿಕೊಳ್ಳಲು ನಗರದ ಜನತೆ ಕಾತರದಿಂದ ಕಾದಿದ್ದರು. ನಗರದ ಹೋಟೆಲ್‌ಗಳಲ್ಲಿ, ಪಬ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ, ಕಡಲ ಕಿನಾರೆಗಳಲ್ಲಿ ಈ ಸಲುವಾಗಿಯೇ ಆಯೋಜಿಸಿದ್ದ ವಿಶೇಷ ವಿನೋದ ಕೂಟಗಳಲ್ಲಂತೂ ‘ಖುಷಿಯ ಧಾರೆ’ ಚಿಮ್ಮಿತು. ಹಾಡು, ಕುಣಿತ, ಹಾಸ್ಯ, ಮನಸ್ಸಿಗೆ ಕಚಗುಳಿ ಇಡುವ ಸ್ಪರ್ಧೆಗಳು ಹೊಸ ವರ್ಷಾಚರಣೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಮತ್ತೇರಿಸುವ ಗಾನ, ಮಧುರ ಪಾನ, ಪುಷ್ಕಳ ಭೋಜನ ಹೊಸ ವರ್ಷಕ್ಕೆ ಅಡಿಯಿಡುವ ಗಳಿಗೆಯನ್ನು ಅವಿಸ್ಮರಣೀಯಗೊಳಿಸಿದವು. ಆಗಸದೆತ್ತರಕ್ಕೆ ನೆಗೆದ ಸುಡುಮದ್ದುಗಳು ರಂಗು ರಂಗಿನ ರಂಗವಲ್ಲಿಗಳನ್ನು ರಚಿಸಿದವು.
ಮಂಗಳವಾರ ಮುಸ್ಸಂಜೆಯಾಗುತ್ತಿದ್ದಂತೆ ಯುವಜನರು ಹೊಸ ವರ್ಷವನ್ನು ಸ್ವಾಗತಿಸಲು ಸಂಭ್ರಮಾಚರಣೆಯನ್ನು ಏರ್ಪಡಿಸಿದ್ದ ಕೂಟಗಳತ್ತ ಮುಖ ಮಾಡಿದರು. ನಗರದ ರಸ್ತೆಗಳು ಕಾರುಗಳಿಂದ ಗಿಜಿಗುಡಲಾರಂಭಿಸದ್ದವು. ಕಡಲ ಕಿನಾರೆಗಳ ಬಳಿಯೂ ಸಂಜೆಯಿಂದಲೇ ಜನಜಂಗುಳಿ ಹೆಚ್ಚಿತ್ತು.
ನಗರದ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಹಾಗೂ ಮನೆಗಳ ಲಾನ್‌ಗಳಲ್ಲೂ ಅಕ್ಕ ಪ್ಕಕದ ನಿವಾಸಿಗಳು ಸೇರಿ ಸಂಭ್ರಮಿಸಿದರು.
ನಗರದ ಬಿಷಪ್ ಹೌಸ್, ಬೆಂದೂರ್‌ವೆಲ್, ಸೇರಿದಂತೆ ಪ್ರಮುಖ ಚರ್ಚ್‌ಗಳಲ್ಲಿ ಹೊಸವರ್ಷಾಚರನೆ ಪ್ರಯುಕ್ತ ವಿಶೇಷ ಸಾಮೂಹಿಕ ಪ್ರಾರ್ಥನೆಗಳು ನೆರವೇರಿದವು.
ಆಗಸದಲ್ಲಿ ಸುಡುಮದ್ದುಗಳ ರಂಗು ರಂಗಿನ ರಂಗವಲ್ಲಿ ವಿನೋದ ಕೂಟಗಳಲ್ಲಿ ಹಾಸ್ಯ, ಹಾಡು, ಕುಣಿತಗಳ ಕಚಗುಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.