ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ದಾಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2023, 11:12 IST
Last Updated 31 ಮೇ 2023, 11:12 IST
NIA files supplementary charge sheet in Ludhiana Court complex blast
NIA files supplementary charge sheet in Ludhiana Court complex blast   

ಪುತ್ತೂರು/ ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು‌ ಮತ್ತು ಬಂಟ್ವಾಳ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 16 ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನಿಂದ ಬುಧವಾರ ಶೋಧ ಕಾರ್ಯ ನಡೆಸಿದರು.

ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇಲೆ ದಾಳಿಗೆ 2022 ರ ಜುಲೈನಲ್ಲಿ ಸಂಚು ನಡೆಸಿದ್ದ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅದರ ಅಂಗವಾಗಿ ಜಿಲ್ಲೆಯಲ್ಲೂ ಕೆಲವು ಮನೆಗಳು, ಕಚೇರಿಗಳು ಹಾಗೂ ಒಂದು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿದ್ದಾರೆ. ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮೂಲಕ ರವಾನೆಯಾದ ಹಣ ಬಳಕೆಯಾಗಿದೆ ಎಂಬ ಸಂಶಯದಿಂದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಎನ್‌ಐಎ ಅಧಿಕಾರಿಗಳು ದಕ್ಷಿಣ ಭಾರತದ ಪಿಎಫ್‌ಐ ಘಟಕಗಳಿಗೆ ಹವಾಲಾ ಹಣ ಪೂರೈಕೆಯಾಗುತ್ತಿದ್ದ ಜಾಲದ ಬೆನ್ನುಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌.

ಪುತ್ತೂರು ಮತ್ತು ಉಪ್ಪಿನಂಗಡಿ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಎನ್‌ಐಎ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದರು. ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ

ADVERTISEMENT

ಮನೆಯೊಂದನ್ನು ತಪಾಸಣೆ ನಡೆಸಿದ್ದಾರೆ. ನೀರಕಟ್ಟೆಯ ಯುವಕ ವಿಟ್ಲದಲ್ಲಿ ಪೀಠೋಪಕರಣ ಅಂಗಡಿ ಹೊಂದಿದ್ದ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ಶೋಧ ನಡೆಸಿ ಪರಿಶೀಲನೆ ನಡೆಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಪುತ್ತೂರು ತಾಲ್ಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆಗೆ ನಾಲ್ಕು ಜೀಪುಗಳಲ್ಲಿ ಎನ್ಐಎ ಅಧಿಕಾರಿಗಳು ಬಂದಿದ್ದರು. ಕೆರೆಮೂಲೆಯಿಂದ ತುಸು ದೂರ ವಾಹನ ನಿಲ್ಲಿಸಿ ಅಲ್ಲಿಂದ ಕರೆಮೂಲೆ ಪರಿಸರದಲ್ಲಿ ನಡೆದು ಕೊಂಡು ಹೋಗಿ ಸ್ಥಳೀಯರಲ್ಲಿ ಮಾಹಿತಿ ಕಲೆಹಾಕಿದ್ದಾರೆ.

ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕುಟಿನೋಪಿನಡ್ಕ ಮತ್ತು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಡ್ಕ ಕ್ಯಾಂಪ್ಕೋ ಚಾಕಲೇಟ್ ಕಾರ್ಖಾನೆಯ ಬಳಿಯ ವಸತಿ ಸಮುಚ್ಚಯಕ್ಕೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆಂದು ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ತಾಲ್ಲೂಕಿನ ನರಿಕೊಂಬು ಮತ್ತು ಗೋಳ್ತಮಜಲು ಗ್ರಾಮಗಳಲ್ಲಿ ತಲಾ ಎರಡು ಕಡೆ, ಮಾಣಿ, ನೆಟ್ಲಮುಡ್ನೂರು, ಕೊಳ್ನಾಡು, ಸಜಿಪನಡು, ಸಜಿಪಮೂಡ ಗ್ರಾಮಗಳು ಸೇರಿ ಒಟ್ಟು 9 ಕಡೆ ಎನ್ ಐ ಎ ದಾಳಿ ನಡೆಸಿರುವುದಾಗಿ ಇಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ.

ಡಿಜಿಟಲ್ ರೂಪದಲ್ಲಿ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಉಪಕರಣ ಗಳನ್ನು ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.