ಮಂಗಳೂರು: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ನಡೆಸಿದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ಸಮೀಕ್ಷೆ ಮತ್ತು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದ ಚೌಕಟ್ಟಿನಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು 58ನೇ ಶ್ರೇಯಾಂಕ ಪಡೆದಿದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರವೀಣ್ ಮಾರ್ಟಿಸ್, ‘ಭಾರತದಲ್ಲಿರುವ 47 ಸಾವಿರ ಉನ್ನತ ಶಿಕ್ಷಣ ಕಾಲೇಜುಗಳಲ್ಲಿ ಅಲೋಶಿಯಸ್ ಕಾಲೇಜು 58ನೇ ಶ್ರೇಯಾಂಕ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಬೋಧನೆ, ಕಲಿಕೆ, ಸಂಪನ್ಮೂಲ, ಸಂಶೋಧನೆ, ವೃತ್ತಿಪರ ಅಭ್ಯಾಸ, ಪದವಿ ಫಲಿತಾಂಶ, ಗ್ರಹಿಕೆ, ಸಾಮಾಜಿಕ ಕಾಳಜಿ ಮತ್ತು ಒಳಗೊಳ್ಳುವಿಕೆ ಹೀಗೆ ಶಿಕ್ಷಣ ಗುಣಮಟ್ಟದ ಸಮಗ್ರ ಮತ್ತು ವಿಮರ್ಶಾತ್ಮಕ ಮೌಲ್ಯಮಾಪನ ನಡೆಸಿ, ಈ ಶ್ರೇಯಾಂಕ ನೀಡಲಾಗುತ್ತದೆ’ ಎಂದರು.
2023ನೇ ಸಾಲಿನಲ್ಲಿ ಎನ್‌ಐಆರ್‌ಎಫ್ ಸಮೀಕ್ಷೆಯಲ್ಲಿ ಕಾಲೇಜು 80ನೇ ಸ್ಥಾನ ಗಳಿಸಿತ್ತು. ಸಂಸ್ಥೆಯ 145 ವರ್ಷಗಳ ಇತಿಹಾಸದಲ್ಲಿ ಉನ್ನತ ಶಿಕ್ಷಣದಲ್ಲಿ ಈ ಅಭೂತಪೂರ್ವ ಮೈಲಿಗಲ್ಲು ಸಾಧಿಸಿರುವ ಕಾಲೇಜು, ಕಳೆದ ವರ್ಷ ಪರಿಗಣಿತ ವಿಶ್ವವಿದ್ಯಾಲಯವಾಗಿ ರೂಪುಗೊಂಡಿದೆ. ಬರುವ ವರ್ಷಗಳಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ವಿದ್ಯಾರ್ಥಿ, ಅಧ್ಯಾಪಕರ ವಿನಿಮಯ, ಇಂಟರ್ನ್‌ಷಿಪ್ ಕಾರ್ಯಕ್ರಮ, ಕಾನೂನು ಕಾಲೇಜು, ಸ್ಕೂಲ್ ಆಫ್ ಎಜುಕೇಷನ್, ಸ್ಕೂಲ್ ಆಫ್ ಲೀಗಲ್ ಸ್ಟಡೀಸ್, ನಿರ್ದಿಷ್ಟ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲು ಯೋಚಿಸಲಾಗಿದೆ ಎಂದು ಹೇಳಿದರು.
ಸೇಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಜಿಸ್ಟ್ರಾರ್ ಆಲ್ವಿನ್ ಡೇಸಾ, ಪರಿಗಣಿತ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ರೊನಾಲ್ಡ್ ನಜರೆತ್, ಐಕ್ಯುಎಸಿ ಸಂಯೋಜಕ ಸೋನಲ್ ಲೋಬೊ, ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಕಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.