ADVERTISEMENT

‘ಕರ್ನಾಟಕಕ್ಕೆ ಬರುವವರಿಗೆ ನೋಂದಣಿ, ಪಾಸ್‌ ಅಗತ್ಯವಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 8:18 IST
Last Updated 3 ಸೆಪ್ಟೆಂಬರ್ 2020, 8:18 IST

ಮಂಗಳೂರು: ಇತರ ರಾಜ್ಯಗಳಿಗೆ ಪ್ರಯಾಣಿಸಲು ಯಾವುದೇ ತಡೆಗಳಿಲ್ಲ. ನೌಕರಿ ಸಂಬಂಧ ನಿತ್ಯ ಕರ್ನಾಟಕಕ್ಕೆ ತೆರಳಿ ಮರಳುವ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ಪ್ರತ್ಯೇಕ ನೋಂದಣಿ, ಪಾಸ್ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

ಕೊರೊನಾ ಕೋರ್ ಸಮಿತಿಯ ಆನ್‌ಲೈನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರುವ, ಕಾಸರಗೋಡು ಜಿಲ್ಲೆಗೆ ನಿತ್ಯ ಬಂದು, ಹೋಗುವ ಮಂದಿ 21 ದಿನಗಳಿಗೊಮ್ಮೆ ಕೋವಿಡ್– 19 ಜಾಗ್ರತಾ ಪೋರ್ಟಲ್‌ನಲ್ಲಿ ಆಂಟಿಜೆನ್ ತಪಾಸಣೆ ಪ್ರಮಾಣಪತ್ರ ಅಪ್‌ಲೋಡ್ ಮಾಡಬೇಕು. ಇವರು ಜಾಲ್ಸೂರು, ಪೆರ್ಲ, ಪಾಣತ್ತೂರು, ಮಾಣಿಮೂಲೆ-ಬಂದಡ್ಕ ರಸ್ತೆಗಳ ಮೂಲಕವೂ ಕರ್ನಾಟಕಕ್ಕೆ ನಿತ್ಯ ಸಂಚಾರ ನಡೆಸಬಹುದು ಎಂದರು.

ADVERTISEMENT

ಸರಕು ವಾಹನಗಳ ಸೇರಿದಂತೆ ವಾಹನಗಳಿಗೆ ಈ ರಸ್ತೆಗಳಲ್ಲಿ ತಡೆ ಇರುವುದಿಲ್ಲ. ಇತರ ರಾಜ್ಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದು, ಈಗ ಕಾಸರಗೋಡು ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಬರುವ ಜನರಿಗೂ ಪಾಸ್ ಅಗತ್ಯವಿಲ್ಲ. ಕೋವಿಡ್– 19 ಪೋರ್ಟಲ್‌ನಲ್ಲಿ ಆ್ಯಂಟಿಜೆನ್‌ ತಪಾಸಣೆ ಪ್ರಮಾಣಪತ್ರ ಅಪ್‌ಲೋಡ್ ಮಾಡಿದರೆ ಸಾಕು ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಮಂತ್ರಾಲಯ ಮತ್ತು ಐ.ಸಿ.ಎಂ.ಆರ್.ನ ಆದೇಶ ಪ್ರಕಾರ 14 ದಿನಗಳ ಕ್ವಾರಂಟೈನ್ ಅನಿವಾರ್ಯವಾಗಿದೆ ಎಂದ ಅವರು, ಕೋವಿಡ್– 19 ಜಾಗ್ರತಾ ವೆಬ್ ಪೋರ್ಟಲ್ ನೋಂದಣಿ ಮಾಡಿದ ಜನರು ರಾಷ್ಟ್ರೀಯ ಹೆದ್ದಾರಿ 66 ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮುಕ್ತಗೊಳಿಸಲಾದ 4 ಗಡಿ ರಸ್ತೆಗಳ ಮೂಲಕ ತೆರಳಿ, ಮರಳ ಬಹುದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.