ADVERTISEMENT

ಅಧಿಕಾರಿಗಳ ಗೈರು: ಪಜೀರು ಗ್ರಾಮಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 16:20 IST
Last Updated 20 ಫೆಬ್ರುವರಿ 2025, 16:20 IST
ಅಧಿಕಾರಿಗಳು ಗೈರಾಗಿದ್ದರಿಂದ ಪಜೀರು ಗ್ರಾಮಸಭೆಯನ್ನು ರದ್ದುಗೊಳಿಸಲಾಯಿತು
ಅಧಿಕಾರಿಗಳು ಗೈರಾಗಿದ್ದರಿಂದ ಪಜೀರು ಗ್ರಾಮಸಭೆಯನ್ನು ರದ್ದುಗೊಳಿಸಲಾಯಿತು   

ಉಳ್ಳಾಲ: ಗುರುವಾರ ನಿಗದಿಯಾಗಿದ್ದ ಪಜೀರು ಗ್ರಾಮ ಪಂಚಾಯಿತಿಯ ದ್ವಿತೀಯ ಸುತ್ತಿನ ಗ್ರಾಮಸಭೆಯನ್ನು ಹಲವು ಅಧಿಕಾರಿಗಳು ಗೈರಾಗಿದ್ದರಿಂದ ರದ್ದುಗೊಳಿಸಲಾಯಿತು.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗಿದ್ದರೂ ಆಹ್ವಾನಿಸಿದ 15 ಇಲಾಖೆಗಳ ಅಧಿಕಾರಿಗಳ ಪೈಕಿ 5 ಮಂದಿ ಮಾತ್ರ ಭಾಗವಹಿಸಿದ್ದರು. ಇದರಿಂದ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರ ಜೊತೆಗೂಡಿ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಗ್ರಾಮಸಭೆಯನ್ನು ಮುಂದೂಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಹಮ್ಮದ್ ರಫೀಕ್ ಮಾತನಾಡಿ, ಹಲವು ಇಲಾಖೆಗಳ ಮಾಹಿತಿ ತಿಳಿದುಕೊಳ್ಳಲು ಗ್ರಾಮಸ್ಥರು ಬಂದಿದ್ದರು. ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯವಾಗಿದ್ದು, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಡಿದ ದಿನಾಂಕವನ್ನು 15 ದಿನಗಳ ಮುನ್ನವೇ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನೀಡಿದ್ದು, ಹಿಂಬರಹ ಪಡೆದುಕೊಂಡಿದ್ದೇವೆ ಎಂದರು.

ADVERTISEMENT

ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆಯವರು ಮಾತ್ರ ಬಂದಿದ್ದು, ಉಳಿದವರು ಗೈರಾಗಿದ್ದಾರೆ. ಇದನ್ನು ಖಂಡಿಸಿ ಗ್ರಾಮಸಭೆ ಮುಂದೂಡಿದ್ದೇವೆ. ಗೈರಾಗಿರುವ ಅಧಿಕಾರಿಗಳ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿಗೆ ವರದಿ ನೀಡಲಿದ್ದೇವೆ ಎಂದರು.

ಗ್ರಾಮಸ್ಥ ಉಮ್ಮರ್ ಪಜೀರ್ ಮಾತನಾಡಿ, ಪ್ರತಿಬಾರಿಯೂ ಪಜೀರು ಗ್ರಾಮಸಭೆಯಲ್ಲಿ ಹಲವರು ಗೈರಾಗಿರುತ್ತಾರೆ. ಆದರೂ ಗ್ರಾಮ ಆಡಳಿತ ತಾಳ್ಮೆಯಿಂದ ಯಾರಿಗೂ ಚ್ಯುತಿ ಬಾರದಂತೆ ಸಭೆ ನಡೆಸುತ್ತಾ ಬಂದಿತ್ತು. ಆದರೆ, ಈ ಬಾರಿ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರಾಗಿರುವುದರಿಂದ ಸಭೆಯನ್ನೇ ಮುಂದೂಡಿದ್ದೇವೆ ಎಂದರು.

ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಸದಸ್ಯರಾದ ಇಮ್ತಿಯಾಝ್, ಸೀತಾರಾಮ ಶೆಟ್ಟಿ, ಮಹಮ್ಮದ್, ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್, ಕಾರ್ಯದರ್ಶಿ ನಾಗೇಶ್, ಮಾಜಿ ಸದಸ್ಯರಾದ ಸಿರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.