ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸಿದರು.
ಮಂಗಳೂರು: ಇಲ್ಲಿನ ಕದ್ರಿ ಹಿಲ್ಸ್ ಯುದ್ಧ ಸ್ಮಾರಕದ ಅಭಿವೃದ್ಧಿಗೆ ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಕದ್ರಿ ಹಿಲ್ಸ್‌ನಲ್ಲಿರುವ ಯುದ್ಧ ಸ್ಮಾರಕದ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾಳೆಯೇ ಒಂದು ತಿಂಗಳ ವೇತನ ಮೊತ್ತದ ಚೆಕ್ ಕಳುಹಿಸುವುದಾಗಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರಿಗೆ ತಿಳಿಸಿದರು.
ವಿಜಯಪುರ, ಬೆಳಗಾವಿ ಹೊರತುಪಡಿಸಿದರೆ ಮಂಗಳೂರಿನಲ್ಲಿ ಇಂತಹ ಸ್ಮಾರಕ ಇದೆ. ದೇಶದ ಗಡಿ ಕಾಯುವ ವೇಳೆ ಅನಿರೀಕ್ಷಿತವಾಗಿ ಸಾವನ್ನಪ್ಪಿದ ಯೋಧರ ಅನೇಕ ಕುಟುಂಬಗಳು ಇಂದಿಗೂ ನೋವಿನಲ್ಲಿವೆ. ದೇಶಕ್ಕಾಗಿ ಜೀವ ಸಮರ್ಪಣೆ ಮಾಡಿದ ಯೋಧರ ಕುಟುಂಬದವರು ಸ್ಮಾರಕಗಳಿಗೆ ಬಂದಾಗ ಅವರಿಗೆ ನೆಮ್ಮದಿ ಸಿಗುತ್ತದೆ. ಈ ಸ್ಮಾರಕವನ್ನು ಚೆನ್ನಾಗಿ ಅಭಿವೃದ್ಧಿ ಮಾಡಬೇಕು. ಇದಕ್ಕೆ ಹೆಚ್ಚುವರಿ ಜಾಗ ಅಗತ್ಯವಿರುವ ಬಗ್ಗೆ ಹೇಳಿದ್ದು, ಇದು ಕೂಡ ಸಿಗುವಂತಾಗಬೇಕು. ಇಂತಹ ಕೆಲಸ ಮಾಡುವಾಗ ವಿಶಾಲ ಮನೋಭಾವ ತೋರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರು ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಯುದ್ಧ ಸ್ಮಾರಕ ಅಭಿವೃದ್ಧಿಗೆ ನೆರವು ನೀಡುವುದಾಗಿ ಘೋಷಿಸಿದರು.
ಶಾಸಕ ವೇದವ್ಯಾಸ ಕಾಮತ್ ಪ್ರಯತ್ನದಿಂದ ಎಸ್‌ಎಫ್‌ಸಿ ವಿಶೇಷ ಅನುದಾನ ₹25 ಲಕ್ಷ ದೊರೆತಿದ್ದು, ಈ ಅನುದಾನದಲ್ಲಿ ಯುದ್ಧ ಸ್ಮಾರಕ ಅಭಿವೃದ್ಧಿ ಪಡಿಸಲಾಗುವುದು. ಹೆಚ್ಚುವರಿ ಹಣ ಅಗತ್ಯವಿದ್ದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಭರಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮಾಜಿ ಯೋಧರ ಸಂಘದ ಅಧ್ಯಕ್ಷ ಶ್ರೀಕಾಂತ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.