ADVERTISEMENT

ಈರುಳ್ಳಿ ಬೆಲೆ ಗಗನಕ್ಕೆ: ಗ್ರಾಹಕರಿಗೆ ಸಂಕಷ್ಟ

ಕರಾವಳಿಯ ಮಾರುಕಟ್ಟೆಗೆ ಪೂರೈಕೆ ಸ್ಥಗಿತ: ದೊಡ್ಡ ಈರುಳ್ಳಿ ಬೆಲೆ ಕೆ.ಜಿಗೆ ₹85ರವರೆಗೆ ಏರಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 2:34 IST
Last Updated 21 ಅಕ್ಟೋಬರ್ 2020, 2:34 IST
ಈರುಳ್ಳಿ
ಈರುಳ್ಳಿ   

ಮಂಗಳೂರು: ಮಹಾರಾಷ್ಟ್ರ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರಕ್ಕೆ ಈರುಳ್ಳಿ ಸರಬರಾಜು ಸ್ಥಗಿತವಾಗಿದ್ದು, ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ನಗರದ ಎಪಿಎಂಸಿಯಲ್ಲಿ ಸಣ್ಣ ಈರುಳ್ಳಿ ಬೆಲೆ ₹60 ಇದ್ದರೆ, ದೊಡ್ಡ ಈರುಳ್ಳಿಯ ದರ ₹85 ರವರೆಗೆ ಏರಿಕೆಯಾಗಿದೆ. ಇನ್ನೆರಡು ದಿನಗಳಲ್ಲಿ ಇದು ₹100 ರ ಗಡಿ ದಾಟಲಿದೆ ಎನ್ನುವ ಮಾತುಗಳು ವರ್ತಕರಿಂದ ಕೇಳಿ ಬಂದಿವೆ.

ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದ್ದ ವೇಳೆ ಉಂಟಾದ ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು, ಎಕರೆಗೆ ಸರಾಸರಿ 250 ಚೀಲದಷ್ಟು ಸಿಗುತ್ತಿದ್ದ ಈರುಳ್ಳಿಯ ಪ್ರಮಾಣ 70 ಚೀಲಗಳಿಗೆ ಇಳಿಕೆಯಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆಯಿಲ್ಲದಿರುವುದೇ ಬೆಲೆ ಏರಿಕೆಗೆ ಕಾರಣ ಎನ್ನುವುದು ಈರುಳ್ಳಿ ವರ್ತಕರ ಮಾತು.

‘ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಬಾಗಲಕೋಟೆ, ಹಾವೇರಿ, ರಾಯಚೂರು ಸೇರಿದಂತೆ ಹಲವೆಡೆ ರೈತರು ಮತ್ತೆ ಈರುಳ್ಳಿ ಬಿತ್ತನೆ ಮಾಡಿರುವುದರಿಂದ ಡಿಸೆಂಬರ್ ಕೊನೆ ಅಥವಾ ಜನವರಿಯ ವೇಳೆಗೆ ಈರುಳ್ಳಿ ಮಾರುಕಟ್ಟೆಗೆ ಬರಲಿದೆ. ಆಗ ಈರುಳ್ಳಿ ದರ ಅಲ್ಪ ಕಡಿಮೆಯಾಗುವ ಸಾಧ್ಯತೆಯಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಮಳೆ ಸುರಿದರೆ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ನಗರದ ಸ್ಟೇಟ್‌ ಬ್ಯಾಂಕ್‌ ಬಳಿಯ ತರಕಾರಿ ವ್ಯಾಪಾರಿ ರಾಜೇಶ್ ಹೇಳುತ್ತಾರೆ.

ADVERTISEMENT

ಈರುಳ್ಳಿ ಅಕ್ಟೋಬರ್-ನವೆಂಬರ್ ವೇಳೆಗೆ ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ಬಾರಿ ವಿಪರೀತ ಮಳೆ ಸುರಿದಿದ್ದರಿಂದ ಫಸಲಿಗೆ ಹಾನಿಯಾಗಿದೆ. ಕಳಪೆ ಗುಣಮಟ್ಟದ ಈರುಳ್ಳಿಗೂ ಇದೀಗ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಈರುಳ್ಳಿ ₹80–₹85 ರವರೆಗೆ ಮಾರಾಟವಾಗುತ್ತಿದ್ದರೆ, ಮಧ್ಯಮ ವರ್ಗದ ಗ್ರಾಹಕರು ಕಳಪೆ ಗುಣಮಟ್ಟದ ಈರುಳ್ಳಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಹೋಟೆಲ್‌, ರೆಸ್ಟೊರೆಂಟ್‌ಗಳಲ್ಲಿ ಈರುಳ್ಳಿ ದೋಸೆ, ಈರುಳ್ಳಿ ಭಜ್ಜಿಗಳು ತಯಾರಿಕೆ ಬಹುತೇಕ ಸ್ಥಗಿತಗೊಂಡಿದೆ.

‘₹100 ರ ಗಡಿ ದಾಟಲಿದೆ’

‘ರಾಜ್ಯದಲ್ಲಿ ಈರುಳ್ಳಿ ಬೆಲೆ ತುಂಬಾ ದುಬಾರಿಯಾಗಿದೆ. ನಗರದ ಹಲವೆಡೆ ₹70-₹85 ವರೆಗೆ ಮಾರಾಟ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈರುಳ್ಳಿ ದರ ₹100 ಗಡಿ ದಾಟಿ ₹150ಕ್ಕೆ ಜಿಗಿಯಲಿದೆ’ ಎಂದು ಎಪಿಎಂಸಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್ ಹೇಳಿದ್ದಾರೆ.

ಪುಣೆ, ಕೊಲ್ಹಾಪುರ, ಬೆಳಗಾವಿ, ಹುಬ್ಬಳ್ಳಿಯಿಂದ ಈರುಳ್ಳಿ ಆಮದಾಗುತ್ತಿತ್ತು. ಸದ್ಯ ಅತಿವೃಷ್ಟಿಯಿಂದ ಆಮದಾಗುತ್ತಿಲ್ಲ. ಏಜೆಂಟರು, ದೊಡ್ಡ ವ್ಯಾಪಾರಸ್ಥರಿಗೆ ಮಾತ್ರ ಇದು ಲಾಭದಾಯಕವಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.