ವಂಚನೆ–ಪ್ರಾತಿನಿಧಿಕ ಚಿತ್ರ
ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಆಮಿಷ ಒಡ್ಡಿ ₹ 37.49 ಲಕ್ಷ ವಂಚನೆ ಮಾಡಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ನಗರದ ಸೆನ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್ ಕಾಲ್ ಮಾಡಿದ್ದ ವ್ಯಕ್ತಿಯೊಬ್ಬರು ತಮ್ಮನ್ನು ದಿವ್ಯಾ ಷಾ ಎಂದು ಪರಿಚಯಿಸಿಕೊಂಡಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಬಹುದು ಎಂದು ಸಲಹೆ ನೀಡಿದ್ದ ಅವರು ತರಬೇತಿಗಾಗಿ ನನ್ನನ್ನು ವಾಟ್ಸ್ ಆ್ಯಪ್ ಗ್ರೂಪ್ ಒಂದಕ್ಕೆ ಸೇರಿಸಿದರು. ಅದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನಿತ್ಯ 3 ಬಾರಿ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸುವ ಕುರಿತು ತರಬೇತಿ ನೀಡಿದ್ದರು.’
‘ಅವರ ಸಲಹೆಯಂತೆ ನಾನು 2025ರ ಏ.18ರಂದು ₹ 1 ಸಾವಿರ ಪಾವತಿಸಿ ಷೇರು ಮಾರುಕಟ್ಟೆಯ ಕೊಂಡಿಯನ್ನು ಪಡೆದುಕೊಂಡಿದ್ದೆ. ಅವರು ಸೂಚಿಸಿದ ಕಂಪನಿಗಳಿಗೆ ಮೇ 29ರವರೆಗೆ ಒಟ್ಟು ₹ 37.49 ಲಕ್ಷ ಹಣ ಹೂಡಿಕೆ ಮಾಡಿದ್ದೆ. ಲಾಭಾಂಶ ಸೇರಿ ಒಟ್ಟು ₹1.30 ಕೋಟಿ ಹಣವು ನನ್ನ ಖಾತೆಯಲ್ಲಿದೆ ಎಂದು ಆ ಆ್ಯಪ್‌ನಲ್ಲಿ ತೋರಿಸುತ್ತಿತ್ತು. ಹಣವನ್ನು ಹಿಂಪಡೆಯಲು ಯತ್ನಿಸಿದಾಗ ಶೇ 20 ರಷ್ಟು ತೆರಿಗೆ ಕಟ್ಟುವಂತೆ ಸೂಚಿಸಿದರು. ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಒತ್ತಾಯಿಸಿದರು. ಬೇರೆ ಬೇರೆ ಕಾರಣ ನೀಡಿ ನನ್ನ ಹಣವನ್ನು ಮರಳಿಸದೇ ಇದ್ದಾಗ ವಂಚನೆಗೆ ಒಳಗಾಗಿದ್ದು ಗೊತ್ತಾಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.