ADVERTISEMENT

ಉಳ್ಳಾಲ | ಅಂಗಾಂಗ ದಾನ: ಮುಖ್ಯಮಂತ್ರಿ ವಿಶೇಷ ಅನುದಾನದಿಂದ ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 5:18 IST
Last Updated 21 ಮಾರ್ಚ್ 2023, 5:18 IST
ಯಶರಾಜ್
ಯಶರಾಜ್   

ಉಳ್ಳಾಲ: ಮೆದುಳು ನಿಷ್ಕ್ರಿಯ ಗೊಂಡಿದ್ದ ಯುವಕ ಅಂಗಾಗ ದಾನ ಮಾಡಿದ್ದ ಕುಟುಂಬಕ್ಕೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ₹5 ಲಕ್ಷ ಪರಿಹಾರ ದೊರೆತಿದೆ.

ಉಳ್ಳಾಲ ಮಾಸ್ತಿಕಟ್ಟೆ, ಬೈದೆರೆಪಾಲು ನಿವಾಸಿಗಳಾದ ತ್ಯಾಗರಾಜ್ , ಮಮತಾ ಕರ್ಕೇರ ದಂಪತಿಯ ಪುತ್ರ ಯಶರಾಜ್ (16) ಕಳೆದ ಸೆಪ್ಟೆಂಬರ್ 7ರಂದು ಬೆಳಿಗ್ಗೆ ಉಳ್ಳಾಲದಿಂದ ಸಿಟಿ ಬಸ್‌ನಲ್ಲಿ ಮಂಗಳೂರಿನ ಕಾಲೇಜಿಗೆ ಬರಲು ಪ್ರಯಾಣಿಸುತ್ತಿದ್ದಾಗ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟಿದ್ದರು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸೆ.13ರಂದು ಮಧ್ಯಾಹ್ನ ಯಶರಾಜ್ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ವೈದ್ಯರು ಘೋಷಿಸಿದ್ದರು. ಪೋಷಕರ ನಿರ್ಧಾರದಂತೆ ಯಶರಾಜ್ ಅಂಗಾಂಗಗಳನ್ನ ದಾನ ಮಾಡಲಾಗಿತ್ತು.

ADVERTISEMENT

ಸಾವಲ್ಲೂ ಸಾರ್ಥಕತೆ ಮೆರೆದ ಯಶರಾಜ್ ಮನೆಗೆ ಭೇಟಿ ನೀಡಿದ ಶಾಸಕ ಖಾದರ್ ಅವರು ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ‌ ಪರಿಹಾರ ಕೊಡಿಸುವುದಾಗಿ ಮಾತು ಕೊಟ್ಟಿದ್ದರು.

‘ಅಂಗಾಂಗ ದಾನ ಎಂಬುದು ಭಾವನಾತ್ಮಕ ವಿಚಾರ. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು. ಯಶರಾಜ್ ಮೆದುಳು ನಿಷ್ಕ್ರಿಯಗೊಂಡಿದ್ದ ಸಂದರ್ಭದಲ್ಲಿ ಆತನ ಕುಟಂಬದವರು ಅಂಗಾಂಗ ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಆತನಿಂದ ಆರು ಜನ ಜೀವಿಸುವಂತಾಗಿದೆ. ಇತ್ತೀಚೆಗೆ ಕುತ್ತಾರಲ್ಲಿ ನಡೆದ ಅಪಘಾತದಲ್ಲಿ ಕಲ್ಲಾಪಿನ ಭೂಷಣ್ ರೈ ಎಂಬ ಯುವಕನ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಲಾಗಿತ್ತು. ಅವರ ಕುಟುಂಬಕ್ಕೂ ಸಹಾಯವಾಗುವ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು ಶೀಘ್ರ ಹಣ ಬಿಡುಗಡೆಯಾಗಲಿದೆ’ ಎಂದು ಖಾದರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.