ADVERTISEMENT

ಬಾರ್ದೆ: ಭತ್ತ ಕಟಾವು; ಗುರುಗಳೂ ಭಾಗಿ

ಕೃಷಿ ಕಾರ್ಯದಲ್ಲಿ ಭಾಗಿಯಾದ ಕಾಲೇಜು ಪ್ರಾಂಶುಪಾಲರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 12:06 IST
Last Updated 19 ಡಿಸೆಂಬರ್ 2018, 12:06 IST
ಅಂಬಿಕಾರೋಡ್ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಜಿಲ್ಲೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು. 
ಅಂಬಿಕಾರೋಡ್ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಜಿಲ್ಲೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು.    

ಉಳ್ಳಾಲ: ಕೃಷಿಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ಜಿಲ್ಲೆಯ 30 ಮಂದಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು ಬೆಳೆಸಿದ ಭತ್ತದ ಪೈರು ಕಟಾವಿನಲ್ಲಿ ಕೈಜೋಡಿಸಿದರು.

ಅಂಬಿಕಾರೋಡ್ ಬಾರ್ದೆ ಎಂಬಲ್ಲಿ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಸೇರಿಕೊಂಡು ನಾಟಿ ಕಾರ್ಯ ನಡೆಸಿದ್ದರು. ಒಂದು ಗದ್ದೆಯಲ್ಲಿ ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಕಾಲೇಜಿನ ಸುಮಾರು 40 ಮಂದಿ ವಿದ್ಯಾರ್ಥಿಗಳು ಮೂರು ತಿಂಗಳ ಹಿಂದೆ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ಅದರ ಭತ್ತದ ಪೈರಿನ ಕಟಾವಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕೈಜೋಡಿಸಿದರು. ಬೆಳಿಗ್ಗೆ 8 ಗಂಟೆಯಿಂದ ಕಟಾವು ಕಾರ್ಯದಲ್ಲಿ ತೊಡಗಿಸಿದ್ದ ಸಂಘದ ಕಾರ್ಯಕರ್ತರು ಮಧ್ಯಾಹ್ನದವರೆಗೆ ಸುಡುಬಿಸಿಲಿನಲ್ಲಿ ಭಾಗವಹಿಸಿದ್ದರು.

ಕೃಷಿಕರು ಅನುಕೂಲವಾಗುವುದಾದಲ್ಲಿ ಮುಂದೆಯೂ ಹೆಚ್ಚಿನ ಮಂದಿಯನ್ನು ಸೇರಿಸಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಭಾಗವಹಿಸಿದ ಪ್ರಾಂಶುಪಾಲರೆಲ್ಲರ ಅಭಿಪ್ರಾಯವಾಗಿದೆ. ‘ಅರ್ಥಪೂರ್ಣವಾದ ಕಾರ್ಯಕ್ರಮ. ನಾನೂ ಕೃಷಿ ಕುಟುಂಬದಿಂದ ಬಂದವನು. ವೃತ್ತಿ ನಿಮಿತ್ತ ನಗರಕ್ಕೆ ಬಂದಾಗ ಕೃಷಿ ಕಾರ್ಯದಲ್ಲಿ ಭಾಗಿಯಾಗಲು ಆಸೆಯಿತ್ತು. ಪ್ರಾಚಾರ್ಯರ ಸಂಘದಿಂದ ಅದು ನೆರವೇರಿದೆ. ಕೃಷಿಕರಿಗೆ, ನಾಗರಿಕರಿಗೆ ಕೃಷಿ ಬಗ್ಗೆ ಒಲವು ಹೆಚ್ಚಾಗುವುದು’ ಎಂದು ಮಂಗಳೂರು ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಯೂಸುಫ್ ಅಭಿಪ್ರಾಯ ಪಟ್ಟರು.

ADVERTISEMENT

‘ನಮಗೆ ಕೃಷಿಕರ ಕಷ್ಟಕಾರ್ಪಣ್ಯಗಳ ಅರಿವಿದೆ. ಇಂದಿನ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಮಾಹಿತಿಯಿಲ್ಲ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳಿಂದ ಅರಿವು ಆಗಬೇಕಿದೆ. ದೈಹಿಕ ಕ್ಷಮತೆ, ದೃಢತೆಯ ಜೊತೆಗೆ ಮಾನಸಿಕ ನೆಮ್ಮದಿ ಕೃಷಿ ಕೆಲಸದಿಂದ ಆಗುತ್ತದೆ’ ಎಂದು ಕಾಟಿಪಳ್ಳ ಶ್ರೀ ನಾರಾಯಣ ಗುರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಉಮೇಶ್ ಕರ್ಕೇರ ಅಭಿ‍ಪ್ರಾಯಪಟ್ಟರು.

ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಎಲ್ವಿರಾ ಫಿಲೋಮಿನಾ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಕೆ ಉಪಾಧ್ಯಾಯ, ಉಪಾಧ್ಯಕ್ಷರಾದ ಉಮೇಶ್ ಕರ್ಕೇರ, ಶರ್ಮಿಳಾ ರಾವ್, ಕಾರ್ಯದರ್ಶಿ ಯೂಸುಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.