ADVERTISEMENT

ಅತಿವೃಷ್ಟಿ; ಭತ್ತ, ಅಡಿಕೆ ಕೃಷಿಕ ಕಂಗಾಲು

'ಅನ್ನ'ಕ್ಕೂ ವರುಣನ ಗದಾಪ್ರಹಾರ:

ಶಶಿಧರ ಕುತ್ಯಾಳ
Published 11 ಸೆಪ್ಟೆಂಬರ್ 2019, 7:41 IST
Last Updated 11 ಸೆಪ್ಟೆಂಬರ್ 2019, 7:41 IST
ಕೊಳೆಯೋಗ ಬಾಧಿಸಿರುವ ಅಡಿಕೆತೋಟ
ಕೊಳೆಯೋಗ ಬಾಧಿಸಿರುವ ಅಡಿಕೆತೋಟ   

ಪುತ್ತೂರು: ಈ ಬಾರಿ ಮಳೆ ನಿಲ್ಲೋದಿಲ್ಲ.. ಅಡಿಕೆ ಬೆಳೆ ಈಗಾಗಲೇ ನಾಶವಾಗುತ್ತಿದೆ. ಭತ್ತದ ಬೆಳೆಯೂ ಕೈಗೆ ಸಿಗುವ ಹಾಗಿಲ್ಲ.. ನಮ್ಮ ಉಣ್ಣುವ ಅನ್ನದ ಮೇಲೂ ವರುಣ ಗದಾಪ್ರಹಾರ ನಡೆಸುತ್ತಿದ್ದಾನೆ’ ಎಂಬ ಅಳಲು ರೈತರಿಂದ ವ್ಯಕ್ತವಾಗುತ್ತಿದೆ.

‌ಎರಡು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕಳೆದ ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದಾಗಿ ಕರಟಿ ಹೋಗಲು ಆರಂಭಿಸಿದ್ದ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದ್ದ ಕೃಷಿಕರು ಈದೀಗ ಅಡಿಕೆ ಫಸಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಭತ್ತವನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಅವರದ್ದಾಗಿದೆ.

ಸಾಮಾನ್ಯವಾಗಿ ಆಗಸ್ಟ್ 15ರ ನಂತರ ಮಳೆಯ ತೀವ್ರತೆ ಕಡಿಮೆಯಾಗುತ್ತಿತ್ತು. ಆದರೆ ಈ ಬಾರಿ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲೂ ಅತಿವೃಷ್ಟಿಯಾಗುತ್ತಿದೆ. ಮೊದಲ ಹಂತದಲ್ಲಿ ಅಡಿಕೆ ತೋಟಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿದ್ದ ರೈತರು ಎರಡನೇ ಹಂತದ ಔಷಧಿ ಸಿಂಪಡಣೆಗೆ ಮಳೆ ಅವಕಾಶವನ್ನೇ ನೀಡಿಲ್ಲ. ಒಂದು ಸಲ ದ್ರಾವಣ ಸಿಂಪಡಣೆ ಮಾಡಿದರೆ ನಂತರ 40 ದಿನಗಳ ಒಳಗಾಗಿ ಮತ್ತೆ ಸಿಂಪಡಣೆ ಮಾಡಬೇಕು. ಇಲ್ಲವಾದರೆ ಅಡಿಕೆ ಫಸಲಿಗೆ ಕೊಳೆರೋಗ ಭಾದಿಸುತ್ತದೆ. ಈ ವರ್ಷ ಜೂನ್ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದ ಕಾರಣ ರೈತರು ಮೊದಲ ಹಂತದ ಸಿಂಪಡಣೆಯನ್ನು ಸುಲಭವಾಗಿಯೇ ನಡೆಸಿದ್ದರು. ಆದರೆ ನಂತರ ಔಷಧಿ ಸಿಂಪಡಣೆ ನಡೆಯಲೇ ಇಲ್ಲ. ಹಾಗಾಗಿ ತಾಲ್ಲೂಕಿನ ಬಹುತೇಕ ರೈತರ ಅಡಿಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಅಡಿಕೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ರೈತರ ಆರ್ಥಿಕ ಚೈತನ್ಯ ಉಡುಗಿಹೋಗುವ ಆತಂಕ ಸೃಷ್ಟಿಯಾಗಿದೆ.

ADVERTISEMENT

ಭತ್ತ ಬೆಳೆಗಾರರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಭತ್ತದ ಬೆಳೆಯ ರೈತನಿಗೂ ಮಳೆಯ ಸಮಸ್ಯೆ ಕಾಡುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ನೇಜಿ ನಾಟಿ ಮಾಡಿದ್ದ ರೈತ ವರ್ಗ ಸೆಪ್ಟಂಬರ್ ತಿಂಗಳಾದರೂ ಮಳೆ ಕಡಿಮೆಯಾಗದಿರುವ ಕಾರಣ ಸಂಕಷ್ಟಕ್ಕೀಡಾಗಿದೆ. ನಾಟಿ ಮಾಡಿದ ನೇಜಿ ಪ್ರಸ್ತುತ ಪೈರಾಗಿ ಬೆಳೆದಿದ್ದು, ತೆನೆ ಬಿಡುವ ಸಮಯವಾಗಿದೆ. ಈ ಹಂತದಲ್ಲಿ ಮಳೆ ಬಿದ್ದರೆ ರೈತನ ಪಾಲಿಗೆ ಭತ್ತದ ಕಾಳಿನ ಬದಲಿಗೆ ಜೊಳ್ಳು ಮಾತ್ರ ಸಿಗುತ್ತದೆ. ತೆನೆ ಬಿಡುವ ಸಂದರ್ಭದಲ್ಲಿ ಬಿಸಿಲಿನ ಅಗತ್ಯವಿದೆ, ಆದರೆ ಈ ವರ್ಷ ಇದಕ್ಕೆ ತದ್ವಿರುದ್ಧವಾಗಿರುವ ವಾತಾವರಣವಿದೆ.

ಮೇ, ಜೂನ್ ತಿಂಗಳಲ್ಲಿ ಸಮರ್ಪಕವಾದ ಮಳೆ ಬರದೆ ಕಂಗಾಲಾಗಿದ್ದ ರೈತರು ನೇಜಿ ನಾಟಿ ಮಾಡುವುದಕ್ಕೆ ಪರದಾಟ ನಡೆಸಿದ್ದರು. ಆದರೆ ನಾಟಿ ಮಾಡಿದ ನಂತರ ಸುರಿದ ಮಳೆಗೆ ಭತ್ತ ಬೆಳೆಗಾರರು ಸ್ವಲ್ಪಮಟ್ಟಿಗೆ ಖುಷಿಯಾಗಿದ್ದರು. ಮಳೆಯಿಂದಾಗಿ ಬೆಳೆ ಫಸಲು ಹೆಚ್ಚು ಬರಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ ಈಗ ಎಲ್ಲ ಲೆಕ್ಕವೂ ತಲೆಕೆಳಗಾಗಿದೆ.

ಅಡಿಕೆಗೆ ಕೊಳೆರೋಗ ಬಂದು ನಾಶವಾಗಿದೆ. ಭತ್ತ ತೆನೆ ಬಿಡುವ ಮೊದಲೇ ಹಾಳಾಗುವ ಹಂತದಲ್ಲಿದೆ. ಒಟ್ಟಿನಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ. ಭತ್ತ ಬೆಳೆಯೂ ಕೈಗಿಲ್ಲದ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.