ಮಂಗಳೂರು: ಡಿವೈಎಫ್ಐನ ಬಜಾಲ್ ಪಕ್ಕಲಡ್ಕ ಘಟಕದ ವತಿಯಿಂದ ದಿ.ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದ ಅಂಗವಾಗಿ ಬಜಾಲ್‌ನಲ್ಲಿ ಸೌಹಾರ್ದ ಯುವ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್, ‘ಕುಡುಪುವಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಗುಂಪು ಹಲ್ಲೆ ನಡೆಸಿ ಅಶ್ರಫ್ ಎಂಬಾತನನ್ನು ಹತ್ಯೆ ಮಾಡುವಂತೆ ಯುವಕರ ಮನಸ್ಸನ್ನು ಕೆಡಿಸಿರುವ ಶಕ್ತಿ ಹಾಗೂ ಅದರ ಹಿಂದಿನ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳಬೇಕು. ಮತೀಯ ದ್ವೇಷ ಹರಡುವ ಬಹುಸಂಖ್ಯಾತ ಕೋಮುವಾದ ಹಾಗೂ ಅಲ್ಪಸಂಖ್ಯಾತ ಮೂಲಭೂತವಾದಗಳೆರಡನ್ನೂ ಒಪ್ಪಲು ಸಾಧ್ಯವಿಲ್ಲ’ ಎಂದರು.
ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಕುಲಾಲ್, ‘ಬಜಾಲ್ ,ಜಪ್ಪಿನಮೊಗರು ಪರಿಸರದಲ್ಲಿ ಮತೀಯ ಹಿಂಸೆ ನಡೆದಿಲ್ಲ. ಜಾತ್ಯತೀತ ಶಕ್ತಿಗಳ ಸಮಾಜಮುಖಿ ಚಿಂತನೆಗಳಿಂದ ಇಂತಹ ಸೌಹಾರ್ದ ಇಲ್ಲಿ ಉಳಿದಿದೆ’ ಎಂದರು.
ಡಿವೈಎಫ್ಐ ದ.ಕ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್, ‘ಸಂಘ ಪರಿವಾರದ ಮತೀಯ ರಾಜಕಾರಣಕ್ಕೆ ಬಲಿಯಾಗದೆ ಯುವಜನರು ಉದ್ಯೋಗ, ಶಿಕ್ಷಣ, ಆರೋಗ್ಯದಂತಹ ಬದುಕಿನ ಪ್ರಶ್ನೆಗಳನ್ನು ಎತ್ತಬೇಕು’ ಎಂದರು.
ಕಾವುಬೈಲ್ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥಾಪಕ ಸಮಿತಿಯ ಸದಸ್ಯರಾದ ಬಿ. ನಾಗೇಶ್ ಶೆಟ್ಟಿ, ಬಜಾಲ್ ಹೋಲಿ ಸ್ಪಿರೀಟ್ ಚರ್ಚ್ ಸಮಿತಿಯ ವಿಲ್ಫ್ರೆಡ್ ಬಜಾಲ್, ಯುವ ಕಾಂಗ್ರೇಸ್ ಮುಖಂಡ ಆಸಿಫ್ ಬಜಾಲ್, ಡಿವೈಎಫ್ಐ ಮುಖಂಡ ರಿಜ್ವಾನ್ ಹರೇಕಳ ಮಾತನಾಡಿದರು.
ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಕ್ ಬಜಾಲ್ ಸ್ವಾಗತಿಸಿ, ಜಗದೀಶ್ ಬಜಾಲ್ ವಂದಿಸಿದರು. ಮುಖಂಡರಾದ ಜಯಂತಿ ಬಿ ಶೆಟ್ಟಿ, ಕಮಲಾಕ್ಷ ಬಜಾಲ್, ರಿಯಾಜ್ ಕಣ್ಣೂರು ಭಾಗವಹಿಸಿದ್ದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.