ADVERTISEMENT

ಮೂಡುಬಿದಿರೆ: ಫಲ್ಗುಣಿ ನದಿಯಲ್ಲಿ ಜಲಮಟ್ಟ ಏರಿಕೆ

ಮೂಡುಬಿದಿರೆ ಪಟ್ಟಣಕ್ಕೆ ನೀರು ಪೂರೈಕೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:47 IST
Last Updated 23 ಜೂನ್ 2023, 13:47 IST
ಮಳೆಯಿಂದಾಗಿ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ
ಮಳೆಯಿಂದಾಗಿ ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ   

-ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು 

ಮೂಡುಬಿದಿರೆ: ಕಳೆದ ಕೆಲವು ದಿನಗಳಿಂದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪುಚ್ಚೆಮೊಗರು ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಅಲ್ಪ ಏರಿಕೆ ಕಂಡಿದ್ದು, ಒಂದು ತಿಂಗಳಿನಿಂದ ನಗರಕ್ಕೆ ಸ್ಥಗಿತಗೊಂಡಿದ್ದ ನೀರು ಪೂರೈಕೆಯನ್ನು ಪುರಸಭೆ ಪುನರಾರಂಭಿಸಿದೆ.

ಮಳೆ ನೀರು ನದಿಗೆ ಹರಿದು ಬರುತ್ತಿದೆ.ಇದರ ಜತೆಗೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇದೆ. ಇದರಿಂದ ಎರಡು ದಿನಗಳಿಂದ ಪುರಸಭೆ ಪಟ್ಟಣಕ್ಕೆ ನೀರು ಪೂರೈಕೆಯನ್ನು ಪುನರಾರಂಭಿಸಿದೆ. ಮಳೆ ವಿಳಂಬವಾದರೂ ಸದ್ಯದ ಮಟ್ಟಿಗೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಪೂರೈಕೆಗೆ ಸಮಸ್ಯೆ ಆಗದು ಎನ್ನುತ್ತದೆ ಪುರಸಭೆ ಮೂಲಗಳು.

ADVERTISEMENT

ಪುಚ್ಚೆಮೊಗರಿನ ಕಿಂಡಿ ಅಣೆಕಟ್ಟು ನಿರ್ಮಾಣವಾದ ಬಳಿಕ ಬೇಸಿಗೆಯಲ್ಲಿ ಫಲ್ಗುಣಿ ನದಿಯ ಒಡಲು ಸಂಪೂರ್ಣ ಬತ್ತಿ ಹೋಗಿದ್ದು, ಮತ್ತು ಪಟ್ಟಣಕ್ಕೆ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು,  20 ವರ್ಷಗಳಲ್ಲಿ ಇದೇ ಮೊದಲು ಎಂದು ಪಂಪ್ ಆಪರೇಟರ್ ಪದ್ಮರಾಜ್ ಜೈನ್ ಹೇಳಿದರು. ಒಂದು ತಿಂಗಳಿಂದ ನದಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡು, ಪರ್ಯಾಯವಾಗಿ ಕೊಳವೆಬಾವಿಯಿಂದ ಒಟ್ಟು ಮೂರು ಟ್ಯಾಂಕರ್‌ಗಳಲ್ಲಿ ನಿತ್ಯ ಒಂದು ಲಕ್ಷ ಲೀಟರ್‌ನಷ್ಟು ನೀರನ್ನು ಪುರಸಭೆ ಪೂರೈಕೆ ಮಾಡುತಿತ್ತು.

ತುರ್ತಾಗಿ ಮೂರು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. 14 ಹೊಸ ಬೋರ್‌ವೆಲ್‌ಗಳಿಗೆ ಪಾಯಿಂಟ್ ಗುರುತಿಸಲಾಗಿದ್ದು ಟೆಂಡರ್ ಕರೆದು ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಪುರಸಭೆ ಎಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಮಾಹಿತಿ ನೀಡಿದರು.

Quote - ಫಲ್ಗುಣಿ ನದಿಯಲ್ಲಿ ಮಳೆ ನೀರು ಶೇಖರಣೆಯಾದ ನಂತರ ಅಲ್ಲಿನ ಜಾಕ್ವೆಲ್‌ ಸ್ವಚ್ಛಗೊಳಿಸಿ ಪುರಸಭೆಯಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈಗ ನೀರಿಗೆ ಅಭಾವ ಇಲ್ಲ ಶಿವ ನಾಯಕ್ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.