ADVERTISEMENT

ದಕ್ಷಿಣ ಕನ್ನಡ: ಕೊರೊನಾ ಜತೆಗೆ ಡೆಂಗಿ, ಮಲೇರಿಯಾ ಆತಂಕ

ಕಳೆದ ವರ್ಷ ಜಿಲ್ಲೆಯನ್ನು ನಡುಗಿಸಿದ್ದ ಸಾಂಕ್ರಾಮಿಕ ರೋಗ

ಚಿದಂಬರ ಪ್ರಸಾದ್
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
ನಿರಾಶ್ರಿತರ ಆಶ್ರಯ ತಾಣಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲೇರಿಯಾ ತಪಾಸಣೆ ನಡೆಸಿದರು.
ನಿರಾಶ್ರಿತರ ಆಶ್ರಯ ತಾಣಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಲೇರಿಯಾ ತಪಾಸಣೆ ನಡೆಸಿದರು.   

ಮಂಗಳೂರು: ಕೊರೊನಾ ಸೋಂಕು ತಡೆ ಕಾರ್ಯಾಚರಣೆ ನಡುವೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತೊಂದು ಸಂಕಷ್ಟ ಎದುರಿಸಲು ಸಜ್ಜಾಗಬೇಕಾಗಿದೆ. ಕಳೆದ ವರ್ಷ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದ್ದವು. ಅದರಲ್ಲೂ ಡೆಂಗಿ ಜ್ವರದ ಹೆಸರು ಕೇಳಿದರೆ ಮೈಯಲ್ಲಿ ನಡುಕ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ 60ರಷ್ಟು ಡೆಂಗಿ ಪ್ರಕರಣ, ಶೇ 90 ರಷ್ಟು ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು.

ಮೊದಲಿಗೆ ನಗರದ ಗುಜ್ಜರಕೆರೆಯಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿತ್ತು. ಆದರೆ, ಇಷ್ಟೊಂದು ವ್ಯಾಪಕವಾಗುತ್ತದೆ ಎಂಬ ಅಂದಾಜು ಅಧಿಕಾರಿಗಳಿಗೂ ಇರಲಿಲ್ಲ. ಗುಜ್ಜರಕೆರೆ, ಮಹಾಕಾಳಿಪಡ್ಪುವಿನಲ್ಲಿ ನಿಯಂತ್ರಣ ಆಗದೇ ಇದ್ದುದರಿಂದ, ಡೆಂಗಿ ಜ್ವರ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ವ್ಯಾಪಿಸುವಂತಾಗಿತ್ತು.

ಕಡಬ ತಾಲ್ಲೂಕಿನ ಕೋಡಿಂಬಾಳ ಗ್ರಾಮದ ವೀಣಾ, ಇಬ್ಬರು ವಿದ್ಯಾರ್ಥಿಗಳು, ಖಾಸಗಿ ವಾಹಿನಿಯ ಕ್ಯಾಮೆರಾಮೆನ್‌, ಆಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಮೇಲ್ವಿಚಾರಕ ಸೇರಿದಂತೆ ಐದು ಜನರು ಮೃತಪಟ್ಟಿದ್ದರು. ಈ ಬಾರಿಯೂ ಡೆಂಗಿ ಕಾಟ ಶುರುವಾಗಿದ್ದು, ಇದೇ 1 ರಂದು ಉಳ್ಳಾಲದ ದೈಹಿಕ ಶಿಕ್ಷಣ ಶಿಕ್ಷಕ ಟೈಟಸ್‌ ಡಿಸೋಜ ಅವರ ಪುತ್ರಿ ಸ್ಟೆನಿಟಾ ಡಿಸೋಜ (15) ಡೆಂಗಿ ಜ್ವರದಿಂದ ಮೃತಪಟ್ಟಿದ್ದಾಳೆ.

ADVERTISEMENT

ಪ್ರತಿ ವರ್ಷವೂ ತಪ್ಪದ ಕಾಟ: ಪ್ರತಿ ವರ್ಷ ಮಳೆಗಾಲದಲ್ಲಿ ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ ಸಾಮಾನ್ಯ ಎನ್ನುವಂತಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಲೇರಿಯಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಈ ಬಾರಿ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಇರುವ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಕೊರೊನಾ ವೈರಸ್‌ ಹರಡುವಿಕೆಯ ತಡೆಯುವುದರ ಮಧ್ಯೆಯೂ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೊರೊನಾ ತಡೆಯ ಜತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

2019 ರಲ್ಲಿ ಸಾಂಕ್ರಾಮಿಕ ರೋಗ (ಜನವರಿಯಿಂದ ಸೆಪ್ಟಂಬರ್‌)

ಡೆಂಗಿ; 1,322

ಮಲೇರಿಯಾ; 2,082

ಇಲಿಜ್ವರ; 150

ಎಚ್1ಎನ್1; 210

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.