ADVERTISEMENT

ಬಂಟ್ವಾಳ | ಸೊರಗಿದೆ ‘ಪಂಜೆ ಮಂಗೇಶರಾಯ ಭವನ’

ಬಂಟ್ವಾಳ: ಅನುದಾನ ಕೊರತೆ ನೆಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:34 IST
Last Updated 10 ಸೆಪ್ಟೆಂಬರ್ 2025, 7:34 IST
ಬಂಟ್ವಾಳದಲ್ಲಿ ಅನುದಾನ ಕೊರತೆ ನೆಪದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಪಾಳು ಬಿದ್ದಿರುವ ‘ಪಂಜೆ ಮಂಗೇಶರಾಯ ಭವನ’
ಬಂಟ್ವಾಳದಲ್ಲಿ ಅನುದಾನ ಕೊರತೆ ನೆಪದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಪಾಳು ಬಿದ್ದಿರುವ ‘ಪಂಜೆ ಮಂಗೇಶರಾಯ ಭವನ’   

ಬಂಟ್ವಾಳ: ಮಕ್ಕಳ ಕವಿ ಎಂದೇ ಗುರುತಿಸಿಕೊಂಡಿದ್ದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಪಂಜೆ ಮಂಗೇಶರಾಯರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ರಂಗ ಮಂದಿರವೊಂದು ಅನುದಾನ ಕೊರತೆ ನೆಪದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿದೆ.

ಪ್ರಸಕ್ತ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆ ಬಳಿ ಇರುವ ವೈದ್ಯರ ವಸತಿಗೃಹದ ಸ್ಥಳದಲ್ಲಿ ಪಂಜೆ ಮಂಗೇಶರಾಯರು 1874ರ ಫೆ.22ರಂದು ಜನಿಸಿದ್ದು, ಇದೀಗ ಅಲ್ಲಿ ಕೇವಲ ಅವರ ಹೆಸರಿನ ಶಿಲಾ ಫಲಕ ಮಾತ್ರ ಇದೆ. 10 ವರ್ಷಗಳ ಹಿಂದೆ ಇಲ್ಲಿನ ಸಾಹಿತ್ಯಾಸಕ್ತರ ಬೇಡಿಕೆಯಂತೆ ಬಿ.ಸಿ.ರೋಡು ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಪಂಜೆ ಮಂಗೇಶರಾಯ ಭವನ ನಿರ್ಮಿಸಲು ಮೀಸಲಿಟ್ಟ ಜಮೀನಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.

ಇದರಿಂದಾಗಿ 2017ರಲ್ಲಿ ಬಂಟ್ವಾಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಆಶಯದಂತೆ ಒಟ್ಟು 51 ಸೆಂಟ್ಸ್ ಜಮೀನು ಮೀಸಲಿಟ್ಟು, ಅದೇ ವರ್ಷ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ₹ 5 ಕೋಟಿ ವೆಚ್ಚದಲ್ಲಿ ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಕಾಮಗಾರಿ ಆರಂಭಗೊಂಡಿತ್ತು. ಈ ನಡುವೆ ವಿರೋಧ ಇದ್ದರೂ ಬಿ.ಸಿ.ರೋಡು ಆಡಳಿತ ಸೌಧ ಬಳಿ ಇದ್ದ ತಾಲ್ಲೂಕಿನ ಏಕೈಕ ಸಾರ್ವಜನಿಕ ರಂಗಮಂದಿರ ಕೆಡವಿ ‘ಪಿಂಕ್ ಶೌಚಾಲಯ’ ನಿರ್ಮಾಣ ಗೊಂಡಿತ್ತು. ಇಲ್ಲಿನ ಬಂಟ್ವಾಳ ನೇತ್ರಾವತಿ ನದಿ ಸಮೀಪದಲ್ಲೇ ನಿರ್ಮಾಣಗೊಳ್ಳುತ್ತಿರುವ ಪಂಜೆ ಭವನ ಅಧ್ಯಯನಾಸಕ್ತರಿಗೊಂದು ವೇದಿಕೆಯಾಗಲಿದೆ. ರಂಗಚಟುವಟಿಕೆ, ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಕ್ಕೆ ಅವಕಾಶ ಸಿಗಲಿದೆ. ಇಲ್ಲಿ ಗ್ರಂಥಾಲಯ, ವಿಶಾಲವಾದ ಸಭಾಂಗಣ, ಪಾರ್ಕಿಂಗ್ ಸೌಲಭ್ಯವೂ ಸಿಗಲಿದೆ ಎಂದು ಪಂಜೆ ಕುಟುಂಬದವರು ಕೂಡಾ ಸಂತಸ ಪಟ್ಟಿದ್ದರು.

ADVERTISEMENT

2020ರಲ್ಲಿ ಪಂಜೆ ಅವರ ಕುಟುಂಬದ ಸದಸ್ಯರು ಬಂದು ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಅವರ ಮೊಮ್ಮಗಳು ಉಷಾ ಅರೋರಾ ಮತ್ತು ಆಕೆಯ ಪತಿ ಪ್ರಕಾಶ್ ಅರೋರಾ ಸಂತಸ ವ್ಯಕ್ತಪಡಿಸಿದ್ದರು. ಕಳೆದ ಅವಧಿಯಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡರೂ ಬಳಿಕ ಕಾಮಗಾರಿ ನನೆಗುದಿಗೆ ಬಿದ್ದು, ಕಟ್ಟಡದಲ್ಲಿ ಪಾಚಿ ಕಾಣಿಸಿಕೊಂಡಿದೆ. ಇದೀಗ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಹೇಳಿದ್ದಾರೆ.

ಈ ಭವನ ಲೋಕಾರ್ಪಣೆಗೊಂಡರೆ ನಾಟಕ ಸಹಿತ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾರ್ವಜನಿಕ ರಂಗಮಂದಿರದ ಕೊರತೆ ನೀಗಿಸುವುದರ ಹಿರಿಯ ಕವಿಗೆ ಹುಟ್ಟೂರಿನ ಗೌರವ ಸಮರ್ಪಣೆ ನೀಡಿದಂತಾಗುತ್ತದೆ ಎನ್ನುತ್ತಾರೆ ರಂಗಕರ್ಮಿ ಮಹಾಬಲೇಶ್ವರ ಟಿ.ಹೆಬ್ಬಾರ್. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಕಾಮಗಾರಿ ಸ್ಥಗಿತಗೊಳ್ಳಲು ಪ್ರಮುಖ ಕಾರಣ ಎಂಬ ಆರೋಪ ಇಲ್ಲಿನ ಸಾಹಿತ್ಯಾಸಕ್ತರಿಂದ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.