ADVERTISEMENT

ಪಂಜಿಮೊಗರು: ಮಳೆ ಬಂದರೆ ಸಮಸ್ಯೆ ಶುರು

ಪದೇ ಪದೇ ಪ್ರವಾಹ, ಧರೆ ಕುಸಿತ – ಹದಗೆಟ್ಟಿವೆ ಒಳ ರಸ್ತೆಗಳು, ಸಂಚಾರ ದಟ್ಟಣೆ– ಜನ ಹೈರಾಣ

ಪಿ.ವಿ.ಪ್ರವೀಣ್‌ ಕುಮಾರ್‌
Published 21 ಅಕ್ಟೋಬರ್ 2025, 6:13 IST
Last Updated 21 ಅಕ್ಟೋಬರ್ 2025, 6:13 IST
ಪಂಜಿಮೊಗರುವಿನಲ್ಲಿ ಈ ಸಲದ ಮಳೆಗಾಲದಲ್ಲಿ ಗುಡ್ಡ ಕುಸಿದು ಪರಿಶಿಷ್ಟ ಜಾತಿಯವರ ಕೆಲ ಮನೆಗಳು ಅಪಾಯಕ್ಕೆ ಸಿಲುಕಿವೆ
ಪಂಜಿಮೊಗರುವಿನಲ್ಲಿ ಈ ಸಲದ ಮಳೆಗಾಲದಲ್ಲಿ ಗುಡ್ಡ ಕುಸಿದು ಪರಿಶಿಷ್ಟ ಜಾತಿಯವರ ಕೆಲ ಮನೆಗಳು ಅಪಾಯಕ್ಕೆ ಸಿಲುಕಿವೆ   

ಮಂಗಳೂರು: ‘ಈ ಹಿಂದೆ ಎರಡು ಕಡೆ ಧರೆ ಕುಸಿದಿತ್ತು. ಎರಡು ಸಲ ಕಟ್ಟಿಸಿದ್ದ ತಡೆಗೋಡೆ  ಮಳೆಗಾಲದಲ್ಲಿ  ಕುಸಿದಿತ್ತು. ಈ ಸಲ ಮಗ, ಸಾಲ ಮಾಡಿ ಪಾಯ ತೆಗೆಸಿ, ಸೈಜುಗಲ್ಲು ಬಳಸಿ ಗಟ್ಟಿಯಾಗಿ ತಡೆಗೋಡೆ ಕಟ್ಟಿಸಿದ್ದ. ಮಳೆಯ ಅಬ್ಬರಕ್ಕೆ ಅದು ಕೂಡಾ ಕುಸಿಯಿತು. ನಮ್ಮ ಮನೆಯೂ ಕುಸಿಯುವ ಆತಂಕ ಎದುರಿಸುತ್ತಿದೆ...’ 

ಪಂಜಿಮೊಗರುವಿನ ಯಶೋದಾ ಅವರು, ತಮ್ಮ ಮನೆ ಪಕ್ಕದಲ್ಲಿ ಧರೆ ಕುಸಿದ ಜಾಗವನ್ನು ತೋರಿಸುವಾಗ ಅವರ ಎದೆ ಬಡಿತ ಜೋರಾಯಿತು. ಭಾರಿ ಮಳೆಯಾದಾಗ ಇಡೀ ಮನೆಗೇ ಕುಸಿಯುತ್ತದೆಯೇನೋ ಎಂಬ ಕಳವಳ ಅವರ ಕಂಗಳಲ್ಲಿ ಇಣುಕುತ್ತಿತ್ತು. 

ಹೆದ್ದಾರಿ ಪಕ್ಕದಲ್ಲಿರುವ ಪಂಜಿಮೊಗರು ವಾರ್ಡ್‌ ನಗರದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಪ‍್ರದೇಶಗಳಲ್ಲೊಂದು. ಹೆದ್ದಾರಿಯ ಪಕ್ಕದಲ್ಲಿ ಕಾಣುವ ಝಗಮಗಿಸುವ ಕಟ್ಟಡಗಳಂತೆ ಇಲ್ಲಿನ ಒಳಪ್ರದೇಶಗಳಿಲ್ಲ. ಈ ವಾರ್ಡ್‌ನ ಪಂಜಿಮೊಗರು ಪ್ರದೇಶದಲ್ಲಿ ತಿರುಗಾಡಿದರೆ ಯಾವುದೋ ಹಳ್ಳಿಯನ್ನು ಹೊಕ್ಕಂತಾಗುತ್ತದೆ. ಇಲ್ಲಿನ ನಿವಾಸಿಗಳು  ಮಳೆಗಾಲದಲ್ಲಿ ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ಪಂಜಿಮೊಗರುವಿನ ಯಶೋದಾ ಅವರ ಮನೆಯ ಕೆಳಗೆ ಪರಿಶಿಷ್ಟ ಜಾತಿಯ ಐದಾರು ಕುಟುಂಬಗಳು ನೆಲೆಸಿವೆ. ಆ ಕುಟುಂಬಗಳು ಮಳೆಗಾಲದಲ್ಲಿ ನಿದ್ದೆ ಇಲ್ಲದೆಯೇ ರಾತ್ರಿಗಳನ್ನು ಕಳೆಯಬೇಕಾದ ಸ್ಥಿತಿ ಇದೆ.

ADVERTISEMENT

‘ಇಲ್ಲಿ ಪ್ರತಿ ಮಳೆಗಾಲದಲ್ಲೂ ಧರೆ ಕುಸಿಯುತ್ತಿದೆ. ಮನೆ ಒಳಗೆ ನೀರು ಬರುತ್ತದೆ. ಈ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದರೆ ಸಾಕಿತ್ತು’ ಎನ್ನುತ್ತಾರೆ ಇಲ್ಲಿನ ನಿವಾಸಿ ವಾರಿಜಾ.

ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತದೆ. ಜೋರು ಮಳೆ ಬಂದಾಗ ಬೈಕಿನಲ್ಲಿ ಹೋಗಲು ಆಗುವುದಿಲ್ಲ. ಈ ರಸ್ತೆಗೆ ಇಂಟರ್‌ಲಾಕ್‌ ಹಾಕಿ ದಶಕವೇ ಆಗಿದೆ. ಇಲ್ಲಿಗೆ ಕಾಂಕ್ರೀಟ್ ರಸ್ತೆ  ನಿರ್ಮಿಸಬೇಕು ಎಂದು ಒತ್ತಾಯಿಸುತ್ತಾರೆ ಲತೀಫ್‌.  

ನದಿ ದಂಡೆಯಲ್ಲೇ ಇರುವ ಈ ವಾರ್ಡ್‌ನ ಮಳೆ ನೀರು ಚರಂಡಿ ವ್ಯವಸ್ಥೆಯಂತೂ ಅಧ್ವಾನ. ಕೂಳೂರು ಜಂಕ್ಷನ್‌ನಿಂದ ಕಾವೂರನ್ನು ಸಂಪರ್ಕಿಸುವ ರಸ್ತೆ ಆರಂಭವಾಗುವಲ್ಲಿ ರಸ್ತೆ ಪಕ್ಕದಲ್ಲಿರುವ ಚರಂಡಿ ನೀರು ನದಿವರೆಗೆ ತಲುಪುವುದಕ್ಕೆ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಪದೇ ಪದೇ ಪ್ರವಾಹ ಎದುರಾದಾಗ ಈ ಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಚರಂಡಿ ಅರ್ದಂಬರ್ಧ ನಿರ್ಮಿಸಿರುವುದರಿಂದ ಈ ಪ್ರದೇಶದಲ್ಲಿ ಪ್ರತಿ ಮಳೆಗಾಲದಲ್ಲೂ ಇಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದು ಮಾಮೂಲಿ ಎಂಬಂತಾಗಿದೆ ಎಂದು ದೂರುತ್ತಾರೆ ಇಲ್ಲಿನ ರಿಕ್ಷಾ ಚಾಲಕರು.

ಸಂಚಾರ ದಟ್ಟಣೆ ಸಮಸ್ಯೆಯೂ ಇಲ್ಲಿನ ನಿವಾಸಿಗಳನ್ನು ಬಾಧಿಸುತ್ತಿದೆ. ಕೆಲವೊಮ್ಮೆ ಕೊಟ್ಟಾರ ತಲುಪುವುದಕ್ಕೂ ಅರ್ಧ ತಾಸು ಆಗುವುದಿದೆ. ಕೂಳೂರಿನ  ಮೇಲ್ಸೇತುವೆಯೂ ಅವೈಜ್ಞಾನಿಕವಾಗಿದೆ. ಅದರ ಪಕ್ಕದ ಸರ್ವಿಸ್ ರಸ್ತೆಗಳಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ ಎಂದು ಸ್ಥಳೀಯರು ದೂರುತ್ತಾರೆ.

ಕೂಳೂರು ಸಂಪರ್ಕ ರಸ್ತೆ ವಿವೇಕನಗರದವರೆಗೆ ಮಾತ್ರ ಜೋಡಿರಸ್ತೆ ಇದ್ದು, ಕಾಂಕ್ರಿಟೀಕರಣಗೊಂಡಿದೆ. ಅದರಲ್ಲಿ ಪಂಜಿಮೊಗರು ಜಂಕ್ಷನ್ ಗಾಂಧಿನಗರ ಪ್ರದೇಶದಲ್ಲಿ ಅರೆಬರೆ ಕಾಮಗಾರಿಗಳಾಗಿವೆ. ಇಲ್ಲಿ ಡಬರ್ ರಸ್ತೆ ಇಲ್ಲ. ವಿವೇಕ ನಗರ ರಸ್ತೆಯ ಸ್ಥಿತಿ ಚೆನ್ನಾಗಿಲ್ಲ. ಸರ್ಕಾರಿ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದೆ.  

ವಾರ್ಡ್ ವಿಶೇಷ

ಕೂಳೂರು ಸೇತುವೆ ದಾಟಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ನಗರಕ್ಕೆ ಬರುವವರನ್ನು ಬರಮಾಡಿಕೊಳ್ಳುವುದೇ ಪಂಜಿಮೊಗರು ವಾರ್ಡ್‌ ನಗರದ ಪಾಲಿನ ಹೆಬ್ಬಾಗಿಲಿನಂತೆ. ಫಲ್ಗುಣಿ ನದಿಯ ಪಕ್ಕದಲ್ಲಿ ಚಾಚಿಕೊಂಡಿರುವ ಈ ವಾರ್ಡ್‌ ಈಗಲೂ ಕೃಷಿ ಪರಿಸರವನ್ನು ಕಾಣಬಹುದು. ಕೂಳೂರು ಮೊಹಿಯುದ್ದೀನ್ ಜುಮ್ಮಾ ಮಸೀದಿ ಕೂಳೂರು ಸೆಂಟ್‌ ಅಂಟೊನಿ ಚರ್ಚ್ ಪಂಜಿಮೊಗರು ಕೋರ್ದಬ್ಬು ದೈವಸ್ಥಾನ ಬ್ರಹ್ಮಮುಗೇರ ದೈವಸ್ಥಾನ ಕೂಳೂರು ಜಾರಂದಾಯ ದೈವಸ್ಥಾನ ಭಜನಾ ಮಂದಿರಗಳು ಇಲ್ಲಿವೆ. ಪಂಜಿಮೊಗರು ಮತ್ತು ಪಡುಕೋಡಿ ಗ್ರಾಮ ಸೇರಿ ಪಂಜಿಮೊಗರು ವಾರ್ಡ್ ರೂಪುಗೊಂಡಿದೆ. ಪಂಜಿಮೊಗರು ರಾಯಿಕಟ್ಟೆ ಕೂಳೂರು ಪಡುಕೋಡಿ ಗುಡ್ಡೆ ಅಂಗಡಿ ಉರುಂದಾಡಿ ಕಂಬಳ ಮಂಜೊಟ್ಟಿ ವಿದ್ಯಾನಗರ ವಿವೇಕನಗರ ಮೇಲುಕೊಪ್ಪಲ ಈ ವಾರ್ಡ್‌ನ ಪ್ರಮುಖ ಪ್ರದೇಶಗಳು.

‘ವಾರ್ಡ್‌ನ ಬಹುತೇಕ ರಸ್ತೆಗಳ ಅಭಿವೃದ್ಧಿ’

ವಾರ್ಡ್‌ನ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆಲವು ರಸ್ತೆ ಅಭಿವೃದ್ಧಿಗೆ ಬಾಕಿ ಇದ್ದು ಅದಕ್ಕಾಗಿ ₹ 6 ಕೋಟಿ ಅನುದಾನ ಮೀಸಲಿಡಲಾಗಿದೆ. ಮಳೆ ನೀರು ಹರಿಯುವ ಚರಂಡಿ ಸಮಸ್ಯೆ ಸಾಕಷ್ಟು ಇತ್ತು. ಅನೇಕ ಕಡೆ ಚರಂಡಿಗಳು ಅರ್ಧಕ್ಕೆ ಕೊನೆಯಾಗುತ್ತಿದ್ದವು. ಅಂತಹದ್ದನ್ನು ಗುರುತಿಸಿ ಅಭಿವೃದ್ಧಿಪಡಿಸಿದ್ದೇವೆ. ಕೂಳೂರು ಜಂಕ್ಷನ್ ಹಾಗೂ ಮೇಲುಕೊಪ್ಪಲದಲ್ಲಿ ಮೈದಾನಕ್ಕೆ ಜಾಗ ಕಾಯ್ದಿರಿಸಲಾಗಿದೆ. ಅದರ ಕಾಮಗಾರಿ ಇನ್ನಷ್ಟೇ ಆಗಬೇಕು. ಕೂಳೂರು ಜಂಕ್ಷನ್‌ ಬಳಿ 10 ಸೆಂಟ್ಸ್  ಮಾರುಕಟ್ಟೆಗೆ ಜಾಗ ಕಾಯ್ದಿರಿಸಿದ್ದೇವೆ.   ₹ 6 ಕೋಟಿ ನುದಾನ ಮೀಸಲಿಟ್ಟಿದ್ದೇವೆ.  ಒಳಚರಂಡಿ ಸಂಪರ್ಕ ಇಲ್ಲದಿರುವುದು ವಾರ್ಡ್‌ನ ಪ್ರಮುಖ ಸಮಸ್ಯೆ. ವೆಟ್‌ವೆಲ್ ನಿರ್ಮಾಣಕ್ಕೆ ಸಂಬಂಧಿಸಿ ಜಾಗದ ಸಮಸ್ಯೆ ಇತ್ತು. ಮೇಲುಕೊಪ್ಪಲ ಪ್ರದೇಶದಲ್ಲಿ ವೆಟ್‌ವೆಲ್‌ ನಿರ್ಮಾಣಕ್ಕೆ ಜಾಗವನ್ನು ಗೊತ್ತುಪಡಿಸಲಾಗಿದೆ. ವಿದ್ಯಾನಗರ ಪಂಜಿಮೊಗರು ಮೇಲುಕೊಪ್ಪಲ ರಾಯಿಕಟ್ಟೆ ಕೂಳೂರಿನ ಭಾಗಶಃ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಇನ್ನಷ್ಟೇ ಆಗಬೇಕು. ಅದಕ್ಕೆ ಯೋಜನೆ ರೂಪಿಸಲಾಗಿದೆ. ಅನಿಲ್ ಕುಮಾರ್ ವಾರ್ಡ್‌ನ ನಿಕಟಪೂರ್ವ ಪಾಲಿಕೆ ಸದಸ್ಯ