ADVERTISEMENT

ಮೆಸ್ಕಾಂ: ವಿದ್ಯುತ್ ದರ ಇಳಿಕೆ ಮಾಡಲು ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 13:32 IST
Last Updated 19 ಫೆಬ್ರುವರಿ 2021, 13:32 IST
ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮಾತನಾಡಿದರು.
ಮಂಗಳೂರಿನಲ್ಲಿ ಶುಕ್ರವಾರ ನಡೆದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮಾತನಾಡಿದರು.   

ಮಂಗಳೂರು: ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯಿಂದ ಎಲ್ಲ ಕ್ಷೇತ್ರಗಳು ಆರ್ಥಿಕ ಮುಗ್ಗಟ್ಟಿನಲ್ಲಿರುವ ಕಾರಣ ಮೆಸ್ಕಾಂ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಮಾಡಬಾರದು, ಬದಲಾಗಿ ದರದಲ್ಲಿ ಇಳಿಕೆ ಮಾಡಬೇಕು ಮತ್ತು ಸೋರಿಕೆಯನ್ನು ನಿಯಂತ್ರಿಸಿ, ನಷ್ಟವನ್ನು ಸರಿದೂಗಿಸಿಕೊಳ್ಳಬೇಕು ಎಂಬ ಒಕ್ಕೊರಲ ಸಲಹೆ ವ್ಯಕ್ತವಾಯಿತು.

ಕರ್ನಾಟಕ ವಿದ್ಯುತ್ ಶಕ್ತಿನಿಯಂತ್ರಣ ಆಯೋಗವು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದಿದ್ದ ಮೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಗ್ರಾಹಕರು ಭಾಗವಹಿಸಿದ್ದರು.

ಐಸ್‌ ಪ್ಲಾಂಟ್ ಮತ್ತು ಕೋಲ್ಡ್ ಸ್ಟೋರೇಜ್ ಸಂಘಟನೆಯ ಅಧ್ಯಕ್ಷ ದೇವಿದಾಸ ಶೆಟ್ಟಿ ಮಾತನಾಡಿ, ‘ಕೋವಿಡ್ ಲಾಕ್‌ಡೌನ್‌ ನಂತರ ಆರು ತಿಂಗಳು ಎಲ್ಲ ಐಸ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿದ್ದವು. ಪ್ರತಿ ಘಟಕ ಸರಾಸರಿ ₹ 2 ಲಕ್ಷ ನಷ್ಟ ಅನುಭವಿಸಿದೆ. ಮೆಸ್ಕಾಂ ಬಿಲ್ ಪಾವತಿಸಲು ಕಂತಿನ ವ್ಯವಸ್ಥೆ ಕಲ್ಪಿಸಿ, ಅನುಕೂಲ ಮಾಡಿಕೊಟ್ಟಿದೆ. ಆದರೆ, ಮೂರು ತಿಂಗಳುಗಳಿಂದ ಕನಿಷ್ಠ ₹ 15 ಸಾವಿರ ಹೆಚ್ಚುವರಿ ಬಿಲ್ ಬರುತ್ತಿದೆ. ರಾತ್ರಿ 10ರಿಂದ ಬೆಳಗಿನ 6.30ರ ತನಕ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಕುರಿತು ಕ್ರಮವಹಿಸಬೇಕು’ ಎಂದರು.

ADVERTISEMENT

‘ಘಟಕಗಳಲ್ಲಿ ಬಳಕೆಯಾಗುವ ವಿದ್ಯುತ್ ಯುನಿಟ್‌ಗಳು, ಘಟಕಗಳು ಇರುವ ದೂರ ಸೇರಿದಂತೆ ಸಮಗ್ರ ಮಾಹಿತಿ ಕಲೆಹಾಕಿ, ಪ್ರಸ್ತಾವ ಸಲ್ಲಿಸಬೇಕು’ ಎಂದುವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭು ದಯಾಳ್ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

‘ಮೆಸ್ಕಾಂ ಗ್ರಾಹಕರ ಸಂಖ್ಯೆ 25 ಲಕ್ಷದಷ್ಟಿದ್ದರೂ, ದೂರು ಸಲ್ಲಿಕೆಯ ಪ್ರಮಾಣ ತೀರಾ ಕಡಿಮೆಯಿದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಹಳೆಯ ಮಾಹಿತಿಯಿಂದ ಕೂಡಿರುವ ಮೆಸ್ಕಾಂ ವೆಬ್‌ಸೈಟ್ ಅಪ್‌ಡೇಟ್ ಗೊಳಿಸಬೇಕು. ಇಲಾಖೆಯಲ್ಲಿ ಇರುವ ಲೋಪದೋಷ ಸರಿಪಡಿಸಬೇಕು, ಬಾಕಿ ಇರುವ ಬಿಲ್ ಮೊತ್ತ ವಸೂಲಿಗೆ ಕ್ರಮವಹಿಸಬೇಕು. ಗ್ರಾಹಕರ ಮೇಲೆ ವಿದ್ಯುತ್ ದರ ಏರಿಕೆ ಹೊರೆ ಹೇರಬಾರದು’ ಎಂದು ಸಾಗರ ಬಳಕೆದಾರರ ವೇದಿಕೆ ಅಧ್ಯಕ್ಷ ವೆಂಕಟಗಿರಿ ಸಲಹೆ ಮಾಡಿದರು.

‘ಕೃಷಿಕರ ಐಪಿ ಸೆಟ್‌ಗಳಿಗೆ ಮೀಟರ್ ಅಳವಡಿಸಬೇಕು. ಯಾವುದಾದರೂ ಒಂದು ಉಪವಿಭಾಗದಲ್ಲಿ ಪೈಲೆಟ್ ಯೋಜನೆ ಕೈಗೆತ್ತಿಕೊಳ್ಳಬೇಕು’ ಎಂದು ಉಡುಪಿಯ ಸತ್ಯನಾರಾಯಣ ಉಡುಪ ಹೇಳಿದರು.

‘ಗ್ರಾಹಕರು ಲಕ್ಷ್ಯವಹಿಸಿದರೆ, ವಿದ್ಯುತ್ ನಷ್ಟ ಕಡಿಮೆ ಮಾಡಬಹುದು. ಎಲ್‌ಇಡಿ ಬಲ್ಬ್ ಬಳಕೆ ಅಭಿಯಾನ ಹೆಚ್ಚು ಪ್ರಚಲಿತಕ್ಕೆ ಬರಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ‘ಚೇಂಜ್ ಓವರ್ ಸ್ವಿಚ್ಛ್’ ಅಳವಡಿಸಿ, ಲಕ್ಷಾಂತರ ಯುನಿಟ್ ವಿದ್ಯುತ್ ಉಳಿಸಬಹುದು. ಕೃಷಿಕರಿಗೆ ಪ್ರತ್ಯೇಕ ವಿದ್ಯುತ್ ಬಿಲ್ ವ್ಯವಸ್ಥೆ ಮಾಡಿ, ವಿನಾಯಿತಿ ನೀಡಬೇಕು. ಕೃಷಿಕರ ಐಪಿ ಸೆಟ್‌ಗೆ ಸ್ಮಾರ್ಟ್ ಮೀಟರ್ ಅಳವಡಿಸಬೇಕು’ ಸೇರಿದಂತೆ ಅನೇಕ ಸಲಹೆಗಳು ವ್ಯಕ್ತವಾದವು.

ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ‘ಸೇವಾ ಕ್ಷೇತ್ರವಾಗಿರುವ ಮೆಸ್ಕಾಂ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಬೇಕು. ವಿದ್ಯುತ್ ಸಾಮಗ್ರಿ ಖರೀದಿ ದೊಡ್ಡ ದಂಧೆಯಾಗಿ ಪರಿಣಮಿಸಿದೆ. ಇದರ ನಿಯಂತ್ರಣಕ್ಕೆ ಕ್ರಮವಾಗಬೇಕು. ವಿದ್ಯುತ್ ಗ್ರಾಹಕರಿಗೆ ವಿಮಾ ಯೋಜನೆ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಆಯೋಗದ ಸದಸ್ಯರಾದ ಎಚ್.ಎಂ.ಮಂಜುನಾಥ್, ಎಂ.ಡಿ.ರವಿ ಇದ್ದರು.

‘ಆಯೋಗ ಅವ್ಯವಹಾರ ಸಹಿಸುವುದಿಲ್ಲ’

‘ಕಳಪೆ ಗುಣಮಟ್ಟದ ಸಾಮಗ್ರಿ ಖರೀದಿ, ಅವ್ಯವಹಾರ ನಡೆದಲ್ಲಿ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಮೂರನೇ ವ್ಯಕ್ತಿಯ ಪರಿಶೀಲನೆಗೆ ಒಳಪಡಿಸಬೇಕು. ಇಲಾಖೆಯ ವಾಹನ ದುರ್ಬಳಕೆ ನಿಯಂತ್ರಣಕ್ಕೆ ವ್ಯವಸ್ಥಾಪಕ ನಿರ್ದೇಶಕರು ಕ್ರಮವಹಿಸಬೇಕು’ ಎಂದು ಸೂಚಿಸಿದ ಆಯೋಗದ ಅಧ್ಯಕ್ಷ ಶಂಭು ದಯಾಳ್, ‘ಲೆಕ್ಕಪತ್ರ ವಿಚಾರದಲ್ಲಿ ಅಧಿಕಾರಿಗಳನ್ನು ದಾರಿ ತಪ್ಪಿಸಿದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ, ರಜೆ ಪಡೆದು ಮನೆಗೆ ಹೋಗಿ’ ಎಂದು ಮುಖ್ಯ ಲೆಕ್ಕಪತ್ರ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಯುನಿಟ್‌ಗೆ ₹ 1.67 ಹೆಚ್ಚಳ ಪ್ರಸ್ತಾವ

ವಿದ್ಯುತ್ ಖರೀದಿ ವೆಚ್ಚದಲ್ಲಿನ ಏರಿಕೆ, ಹಣದುಬ್ಬರದ ಕಾರಣ ನಿರ್ವಹಣಾ ವೆಚ್ಚದಲ್ಲಿ ಆಗಿರುವ ಹೆಚ್ಚಳ ಸರಿದೂಗಿಸಲು ಪ್ರತಿ ಯುನಿಟ್‌ಗೆ ₹ 1.67 ಹೆಚ್ಚಳ ಅನಿವಾರ್ಯ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ಕುಮಾರ್ ಮಿಶ್ರಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.