ADVERTISEMENT

ಜನ ನೆರೆಯಲ್ಲಿ ಮುಳುಗಿರುವಾಗ ಜನಪ್ರತಿನಿಧಿಗಳು ಖುಷಿ ಪಡುತ್ತಿದ್ದಾರೆ: ಲೋಬೊ

ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 8:11 IST
Last Updated 4 ಜುಲೈ 2022, 8:11 IST
ಜೆ.ಆರ್‌.ಲೋಬೊ
ಜೆ.ಆರ್‌.ಲೋಬೊ   

ಮಂಗಳೂರು: ‘ಜನರು ಪ್ರವಾಹದಲ್ಲಿ ಮುಳುಗಿರುವಾಗ ಮಂಗಳೂರಿನ ಜನಪ್ರತಿನಿಧಿಗಳು ಫ್ಲೆಕ್ಸ್‌ ಅಳವಡಿಸಿ, ಹಾರ ಹಾಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ಜನಪ್ರತಿನಿಧಿಗಳ ಪ್ರಚಾರದ ಹುಚ್ಚು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಜನ ಸಮಸ್ಯೆ ಎದುರಿಸುವಂತಾಗಿದೆ. ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಇದು ಸ್ಪಷ್ಟ ಉದಾಹರಣೆ’ ಎಂದು ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಟೀಕಿಸಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರಿನಲ್ಲಿ ಪ್ರವಾಹ ಕಾಣಿಸಿಕೊಳ್ಳುವುದು ಹೊಸತೇನಲ್ಲ. ಆದರೆ, ಈ ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ಪ್ರವಾಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಕೊಟ್ಟಾರ ಚೌಕಿ, ಪಡೀಲ್‌, ಕಣ್ಣೂರು, ಪಂಪ್‌ವೆಲ್‌, ಜ್ಯೋತಿ ಬಳಿ ಪದೇ ಪದೇ ನೀರು ಕಟ್ಟಿಕೊಳ್ಳುತ್ತಿದೆ. ನಾಲ್ಕು ತಿಂಗಳು ಮುನ್ನವೇ ಕಾಲುವೆಗಳ ಹೂಳು ಎತ್ತಿ ಮುಂಜಾಗ್ರತಿ ವಹಿಸಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪಡೀಲ್‌ನಲ್ಲಿ ರೈಲ್ವೆ ಕೆಳಸೇತುವೆ ಬಳಿಯೇ ದೊಡ್ಡ ಕಾಲುವೆ ಇದೆ. ಪ್ರವಾಹ ಉಂಟಾಗುವ ಪ್ರದೇಶದಿಂದ ಅಲ್ಲಿಗೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಿದರೆ ಸಮಸ್ಯೆ ನೀಗಲಿದೆ’ ಎಂದರು.

‘ಕರಾವಳಿಯಲ್ಲಿ ಮಳೆಗಾಲದಲ್ಲಿ ಯಾವುದೇ ಕಾಮಗಾರಿ ನಡೆಸುವುದಿಲ್ಲ. ಮಳೆ ಬರುವಾಗ ಡಾಂಬರು ಹಾಕುವುದಿಲ್ಲ. ಜಲಸಿರಿ, ಸ್ಮಾರ್ಟ್‌ಸಿಟಿ, ಕುಡಿಯುವ ನೀರಿನ ಕೊಳವೆ ಅಳವಡಿಕೆ, ಅಮೃತ್‌ ಯೋಜನೆ ಕಾಮಗಾರಿಗಳಿಗಾಗಿ ಮಳೆಗಾಲದಲ್ಲೂ ಎಲ್ಲ ಕಡೆ ರಸ್ತೆ ಅಗೆದು ಹಾಕಲಾಗಿದೆ. ಕಾಂಕ್ರೀಟ್‌ ರಸ್ತೆಯನ್ನೂ ಒಡೆದು ಹಾಕಲಾಗಿದೆ. ಕೆಲವು ಕಡೆ ಕಾಂಕ್ರೀಟ್‌ ಕಿತ್ತು ತೆಗೆದು ಡಾಂಬರು ಹಾಕಿದ್ದಾರೆ. ಈ ದುರಸ್ತಿ ಕಾರ್ಯಕ್ಕೆ ಯಾವ ಅನುದಾನ ಬಳಸಲಾಗಿದೆ ಎಂದು ಸ್ಪಷ್ಟಪಡಿಸಬೇಕು. ಕಾಂಕ್ರೀಟ್‌ ಅಗೆದಿದ್ದರಿಂದ ಆದ ನಷ್ಟಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ADVERTISEMENT

‘ನಗರದಲ್ಲಿ ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ ಎಂಬುದನ್ನು ಗುರುತಿಸಿ ತಕ್ಷಣ ಒತ್ತುವರಿ ತೆರವುಗೊಳಿಸಬೇಕು. ಪ್ರವಾಹ ಬಂದಾಗ ಒತ್ತುವರಿದಾರರಿಗೆ ನೋಟಿಸ್‌ ನೀಡುವ ಪ್ರಮೇಯವೂ ಎದುರಾಗದು. ತುರ್ತು ಸಂದರ್ಭ ಎದುರಾಗಾದಾದ ಅಧಿಕಾರಿಗಳು ಆ ಅವಕಾಶವನ್ನು ಬಳಸಿಕೊಂಡು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ನಗರ ಗಬ್ಬು ನಾರುತ್ತಿದ್ದರೂ ಕೇಳುವವರಿಲ್ಲ: ಲೋಬೊ ಬೇಸರ

‘ಪೌರಕಾರ್ಮಿಕರು ಮುಷ್ಕರ ನಡೆಸುತ್ತಿರುವುದರಿಂದ ಕಸ ವಿಲೇವಾರಿ ಆಗದೇ ನಗರವೆಲ್ಲ ಗಬ್ಬು ನಾರುತ್ತಿದೆ. ನಾಲ್ಕು ದಿನಗಳಿಂದ ಪೌರ ಕಾರ್ಮಿಕರು ಕಸ ವಿಲೇವರಿ ಸ್ಥಗಿತಗೊಳಿಸಿದರೂ, ಪಾಲಿಕೆಯಾಗಲೀ, ಜನಪ್ರತಿನಿಧಿಗಳಾಗಳಿ, ಸರ್ಕಾರವಾಗಲಿ ತಲೆಕೆಡಿಸಿಕೊಂಡಿಲ್ಲ’ ಎಂದು ಜೆ.ಆರ್‌.ಲೋಬೊ ಬೇಸರ ವ್ಯಕ್ತಪಡಿಸಿದರು.

‘ಪೌರಕಾರ್ಮಿಕರ ಬೇಡಿಕೆ ನ್ಯಾಯಯುತವಾದುದು. ಸರ್ಕಾರ ಅವರನ್ನು ಕಾಯಂಗೊಳಿಸಬೇಕು. 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವೂ ಇದೆ. ನಾನು ಪಾಲಿಕೆ ಆಯುಕ್ತನಾಗಿದ್ದಾಗ ಈ ಆದೇಶ ಬಳಸಿಕೊಂಡು 97 ಪೌರಕಾರ್ಮಿಕರನ್ನು ಕಾಯಂಗೊಳಿಸಿದ್ದೆ’ ಎಂದರು.

‘ಪೌರಕಾರ್ಮಿಕರನ್ನು ಕಾಯಂಗೊಳಸಲು ಸಾಧ್ಯವಿಲ್ಲದಿದ್ದರೆ, ಕಾನೂನುಬದ್ಧವಾಗಿ ಅವರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನಾದರೂ ಕೊಡಿಸ‌ಬೇಕು’ ಎಂದು ಒತ್ತಾಯಿಸಿದರು.

‘ನಗರದ ಕಸ ನಿರ್ವಹಣೆಯ ಹೊಣೆಯನ್ನು ರಾಮಕೃಷ್ಣ ಮಿಷನ್‌ಗೆ ವಹಿಸಿಕೊಟ್ಟರೆ ನಗರದ ಕಸದ ಸಮಸ್ಯೆ ನಿವಾರಣೆ ಆಗಲಿದೆ. ಈ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ ಆರ್ ಲೋಬೊ, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ನವೀನ್ ಡಿಸೋಜ, ಶಾಲೆಟ್ ಪಿಂಟೊ, ವಿಶ್ವಾಸ್ ದಾಸ್, ಸಲೀಂ, ಪ್ರಕಾಶ್ ಸಾಲ್ಯಾನ್, ಟಿ.ಕೆ.ಸುಧೀರ್, ಅಪ್ಪಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.