ADVERTISEMENT

‘ಸೌಹಾರ್ದ ಗ್ರಾಮದ ನಂಬಿಕೆ ಕಟ್ಟಿ ಬೆಳೆಸಿ’

ಪತ್ರಕರ್ತರ ಸಂಘದ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಸ್ವೀಕರಿಸಿದ ನಾ.ಕಾರಂತ ಪೆರಾಜೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 13:11 IST
Last Updated 1 ಜುಲೈ 2022, 13:11 IST
ನಾ. ಕಾರಂತ ಪೆರಾಜೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಮಕೃಷ್ಣ, ಅನು ಮಂಗಳೂರು ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಶ್ಮಿ ಎಸ್‌.ಆರ್‌, ಜಿತೇಂದ್ರ ಕುಂದೇಶ್ವರ, ಯು.ಕೆ. ಕುಮಾರನಾಥ್‌, ಪುಷ್ಪರಾಜ್‌, ಭಾಸ್ಕರ್‌ ರೈ ಇದ್ದಾರೆ –ಪ್ರಜಾವಾಣಿ ಚಿತ್ರ
ನಾ. ಕಾರಂತ ಪೆರಾಜೆ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಮಕೃಷ್ಣ, ಅನು ಮಂಗಳೂರು ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ರಶ್ಮಿ ಎಸ್‌.ಆರ್‌, ಜಿತೇಂದ್ರ ಕುಂದೇಶ್ವರ, ಯು.ಕೆ. ಕುಮಾರನಾಥ್‌, ಪುಷ್ಪರಾಜ್‌, ಭಾಸ್ಕರ್‌ ರೈ ಇದ್ದಾರೆ –ಪ್ರಜಾವಾಣಿ ಚಿತ್ರ   

ಮಂಗಳೂರು: ನಗರದ ಛಾಯೆ ಇತ್ತೀಚೆಗೆ ಹಳ್ಳಿಗಳಿಗೂ ಆವರಿಸುತ್ತಿದೆ. ಆದರೂ ಸೌಹಾರ್ದದ ವಿಷಯದಲ್ಲಿ ಹಳ್ಳಿಗಳು ಇನ್ನೂ ಮಾದರಿಯಾಗಿ ಉಳಿದುಕೊಂಡಿವೆ. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದರೆ ನೈಜ ಸೌಹಾರ್ದ ಕಾಣಲು ಸಾಧ್ಯ. ಅದನ್ನು ಉಳಿಸಿಕೊಂಡು ಬೆಳೆಸಬೇಕಾದ ಜವಾಬ್ದಾರಿ ಪತ್ರಕರ್ತರದ್ದು ಎಂದು ಅಡಿಕೆ ಪತ್ರಿಕೆಯ ಸಂಪಾದಕ ನಾ. ಕಾರಂತ ಪೆರಾಜೆ ಸಲಹೆ ನೀಡಿದರು.

ಪತ್ರಿಕಾ ದಿನಾಚರಣೆಯ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಹಳ್ಳಿಗಳು ನಗರಗಳ ಪ್ರತಿರೂಪಗಳಾಗಿ ಮಾರ್ಪಡುತ್ತಿವೆ. ಆದರೂ ಅಲ್ಲಿನ ಜನರು ಪತ್ರಕರ್ತರನ್ನು ದೇವರಿಗೆ ಸಮಾನವಾಗಿ ಕಾಣುತ್ತಾರೆ. ಪತ್ರಿಕೆಯಲ್ಲಿ ಪ್ರಕಟಗೊಂಡ ಸುದ್ದಿಗಳು ನಿಜ ಇರಲಿ, ಸುಳ್ಳು ಇರಲಿ ಅವುಗಳನ್ನು ಮುಗ್ದವಾಗಿ ನಂಬುತ್ತಾರೆ. ಈ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲೆ ಇದೆ. ಹಳ್ಳಿಗಳಲ್ಲಿ ಸಿಗುವ ಆತಿಥ್ಯಕ್ಕೆ ಬೆಲೆ ಕಟ್ಟಲಾಗದು. ನಗರಗಳಲ್ಲಿ ಪತ್ರಕರ್ತರಿಗೆ ಗೌರವ ಸಿಗುತ್ತಿದ್ದರೆ ಅದಕ್ಕೆ ಹೆದರಿಕೆಯೇ ಪ್ರಮುಖ ಕಾರಣ ಆಗಿರುತ್ತದೆ’ ಎಂದು ಅವರು ಹೇಳಿದರು.

ADVERTISEMENT

ಕೋವಿಡೋತ್ತರ ಪತ್ರಿಕೋದ್ಯಮದ ಕುರಿತು ಉಪನ್ಯಾಸ ನೀಡಿದ ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಯು.ಕೆ.ಕುಮಾರನಾಥ್ ‘ಸಮೃದ್ಧವಾಗಿದ್ದ ಪತ್ರಿಕಾ ರಂಗ ಕೋವಿಡ್ ಕಾಲದಲ್ಲಿ ಪೆಟ್ಟು ತಿಂದಿತು. ಆದರೆ ನಂತರ ಬಹುಮಾಧ್ಯಮಕ್ಕೆ ಪತ್ರಿಕಾರಂಗ ತೆರೆದುಕೊಳ್ಳಲು ಕೋವಿಡ್ ಹೇತುವಾಯಿತು. ಪತ್ರಕರ್ತರಿಗೆ ತಮ್ಮ ಕೌಶಲ ಸಾಬೀತು ಮಾಡುವುದಕ್ಕೆ ಬಹುಮಾಧ್ಯಮ ಅವಕಾಶಗಳನ್ನು ಒದಗಿಸಿದೆ’ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರಶ್ಮಿ ಎಸ್‌.ಆರ್‌. ಕಾರ್ಯಕ್ರಮ ಉದ್ಘಾಟಿಸಿ ‘ರೋಗಿಗೆ ವೈದ್ಯರು ಇದ್ದಂತೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಕರ್ತರು ಬೇಕು. ಮಾಧ್ಯಮಗಳು ಸದಾ ಸತ್ಯದ ಪರವಾಗಿ ಇರಬೇಕು’ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಜಿತೇಂದ್ರ ಕುಂದೇಶ್ವರ, ರಾಮಕೃಷ್ಣ ಆರ್‌, ಜಗನ್ನಾಥ ಶೆಟ್ಟಿ ಬಾಳ, ಅನು ಮಂಗಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.