ADVERTISEMENT

ಫಲ್ಗುಣಿ ನದಿಯ ಎರಡು ಸೇತುವೆ ಮರುನಿರ್ಮಾಣ

ಲೋಕೋಪಯೋಗಿ ಇಲಾಖೆಯಿಂದ ಪೊಳಲಿ ಸೇತುವೆಗೆ ₹ 33 ಕೋಟಿ; ಮರವೂರು ಸೇತುವೆಗೆ ₹ 40 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 8:32 IST
Last Updated 25 ಫೆಬ್ರುವರಿ 2026, 8:32 IST
ಮರವೂರು ಫಲ್ಗುಣಿ ನದಿ
ಮರವೂರು ಫಲ್ಗುಣಿ ನದಿ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ, ಎರಡು ಸೇತುವೆಗಳು ಶಿಥಿಲಗೊಂಡಿದ್ದು, ಅವುಗಳ ಮರುನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ₹ 73 ಕೋಟಿ ಅನುದಾನ ಮಂಜೂರಾಗಿದೆ.

ಮಂಗಳೂರು– ಆತ್ರಾಡಿ ರಾಜ್ಯ ಹೆದ್ದಾರಿಯಲ್ಲಿರುವ ಮರವೂರು ಹಳೆ ಸೇತುವೆ ಹಾಗೂ ಬಿ.ಸಿ.ರೋಡ್‌– ಬಜಪೆ ರಾಜ್ಯ ಹೆದ್ದಾರಿಯಲ್ಲಿರುವ ಪೊಳಲಿಯ ಹಳೆ ಸೇತುವೆಗಳು ಶಿಥಿಲಗೊಂಡಿದ್ದವು. ಲೋಕೋಪಯೋಗಿ ಇಲಾಖೆಯಿಂದ ಮರವೂರು ಸೇತುವೆಗೆ ₹ 40 ಕೋಟಿ ಹಾಗೂ ಪೊಳಲಿ ಸೇತುವೆಗೆ ₹ 33 ಕೋಟಿ ಅನುದಾನ ಮಂಜೂರಾಗಿದೆ ಎಂದು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ರಾಘವೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

ಈ ಕಾಮಗಾರಿಗಳಿಗೆ ಇನ್ನಷ್ಟೇ ಟೆಂಡರ್ ಕರೆಯಬೇಕಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸುವಷ್ಟರಲ್ಲಿ ಮಳೆಗಾಲ ಶುರುವಾಗಲಿದೆ. ಮಳೆಗಾಲ ಮುಗಿದ ಬಳಿಕವೇ ಕಾಮಗಾರಿಗಳನ್ನು ಆರಂಭಿಸಬಹುದು ಎಂದು ಅವರು ಹೇಳಿದರು. 

ADVERTISEMENT

ಫಲ್ಗುಣಿ ನದಿಗೆ 1970ರಲ್ಲಿ ಪೊಳಲಿಯಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಶಿಥಿಲಗೊಂಡಿದ್ದರಿಂದ ಭಾರಿ ವಾಹನಗಳು ಅದನ್ನು ಬಳಸದಂತೆ 2024ರ ಆ.16ರಿಂದ ನಿರ್ಬಂಧ ಹೇರಲಾಗಿತ್ತು. ಬಳಿಕ  ₹ 6.10 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ಬಲಪಡಿಸುವ ಕಾಮಗಾರಿ 2025ರ ಜನವರಿಯಲ್ಲಿ ಶುರುವಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸಹಜ ಸ್ಥಿತಿಗೆ ಮರಳಿತ್ತು. ಈ ಮಾರ್ಗದಲ್ಲಿ ಸದಾ ವಾಹನ ದಟ್ಟಣೆ ಇರುವುದರಿಂದ, ಭಾರಿ ವಾಹನಗಳು ಸಂಚರಿಸುವುದರಿಂದ ಪೊಳಲಿಯಲ್ಲಿ ಹೊಸಸೇತುವೆಯನ್ನೇ ನಿರ್ಮಿಸಬೇಕೆಂಬ ಬೇಡಿಕೆ ಇತ್ತು.   

ಮರವೂರಿನಲ್ಲಿ ಫಲ್ಗುಣಿ ನದಿಗೆ 1968ರಲ್ಲಿ ಸೇತುವೆ ರ್ಮಾಣವಾಗಿತ್ತು. ನಗರದಿಂದ ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹಾಗೂ ಕಟೀಲಿಗೆ ಸಂಪರ್ಕ ಕಲ್ಪಿಸುವ  ಈ ಸೇತುವೆ 2021ರ ಜೂನ್ 15ರಂದು ಸೇತುವೆ ಬಿರುಕು ಬಿಟ್ಟಿತ್ತು. ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಹಳೆಸೇತುವೆಯ ಒಂದು ಪಿಲ್ಲರ್‌ 2.5 ಅಡಿಗಳಷ್ಟು ಕುಸಿದಿತ್ತು. ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.  ಬಜಪೆ, ಕಟೀಲಿನ ಕಡೆಯಿಂದ ಜೋಕಟ್ಟೆ ಮಾರ್ಗವಾಗಿ ನಗರಕ್ಕೆ ಬರಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು.  

ಕುಸಿದ ಸೇತುವೆಯನ್ನು 1 ಸಾವಿರ ಟನ್‌ ತೂಕದ ಹೈಡ್ರೋಲಿಕ್‌ ಜ್ಯಾಕ್‌ ಬಳಸಿ ಮೇಲಕ್ಕೆತ್ತಿ ದುರಸ್ತಿಪಡಿಸಲಾಗಿತ್ತು. ಈ ಕಾಮಗಾರಿ ಮುಗಿದ ಬಳಿಕ 2021ರ ಜುಲೈ 30ರಿಂದ ವಾಹನ ಸಂಚಾರ ಪುನರಾರಂಭಗೊಂಡಿತ್ತು. 

ಮರವೂರಿನಲ್ಲಿ ಹೊಸ ಸೇತುವೆ ನಿರ್ಮಾಣ ಪೂರ್ಣಗೊಂಡ ಬಳಿಕ ಹಳೆ ಸೇತುವೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವಿಮಾನ ನಿಲ್ದಾಣ ಸಂಪರ್ಕ ರಸ್ತೆ ಚತುಷ್ಫಥಗೊಂಡಿದ್ದರೂ ಮರವೂರಿನ  ಸೇತುವೆಯಲ್ಲಿ ವಾಹನಗಳು ಎರಡು ಪಥಗಳಲ್ಲಿ ಮಾತ್ರ ಸಾಗಲು ಅವಕಾಶ ಇದೆ. ಈ ಮಾರ್ಗದಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ.

‘ಹಳೆಯ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಅಲ್ಲಿ ಹೊಸ ಸೇತುವೆ ನಿರ್ಮಿಸಬೇಕಾಗುತ್ತದೆ. ಪರ್ಯಾಯವಾಗಿ ಇನ್ನೊಂದು ಸೇತುವೆ ಇರುವುದರಿಂದ ಕಾಮಗಾರಿ ವೇಳೆ ಸಮಸ್ಯೆ ಎದುರಾಗದು. ಆದರೆ, ಹೊಸ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಒಂದೂವರೆ ವರ್ಷವಾದರೂ ಬೇಕಾಗುತ್ತದೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.