ADVERTISEMENT

‘ಜಿಲ್ಲೆಯಲ್ಲಿ ಫಲಾನುಭವಿಗಳಿಗಿಂತ ಹೆಚ್ಚು ಮನೆ ಮಂಜೂರು’

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 9:41 IST
Last Updated 12 ಮಾರ್ಚ್ 2020, 9:41 IST

ಹಮೀದ್ ವಿಟ್ಲ
* ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪ್ರಕ್ರಿಯೆ ಹೇಗೆ?

– ಪ್ರವೇಶಕ್ಕಾಗಿ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಇಲ್ಲವೇ ಹತ್ತಿರದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ತೆರಳಿದರೆ, ಅವರೇ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಸಹಾಯ ಮಾಡುತ್ತಾರೆ. ಪ್ರವೇಶ ಪರೀಕ್ಷೆಯ ನಂತರ ಪ್ರವೇಶಾತಿ ನೀಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೂ ಆನ್‌ಲೈನ್‌ನಲ್ಲಿಯೇ ಅರ್ಜಿ ಹಾಕಬೇಕು. ವಿದ್ಯಾರ್ಥಿಗಳ ಆಧಾರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.

ಲಕ್ಷ್ಮಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ
* ಸ್ಥಳೀಯವಾಗಿ ನೇಮಕಾತಿಯ ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ ಎಲ್ಲರಿಗೂ ಪೌಷ್ಟಿಕ ಆಹಾರ ಒದಗಿಸಲು ಕ್ರಮ ಕೈಗೊಳ್ಳಿ.

ADVERTISEMENT

–ಇದನ್ನು ಹೆಚ್ಚುವರಿ ಜಿಲ್ಲಾಧಿಕಾರಿಯವರ ಗಮನಕ್ಕೆ ತನ್ನಿ. ಪರಿಹಾರ ಆಗದೇ ಇದ್ದರೆ, ಖುದ್ದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜತೆಗೆ ಸಭೆ ನಡೆಸಿ, ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ಸಲಹೆಯನ್ನು ಲಿಖಿತವಾಗಿ ಕಳುಹಿಸಿಕೊಟ್ಟಲ್ಲಿ, ಸರ್ಕಾರಕ್ಕೆ ಕಳುಹಿಸಲಾಗುವುದು.

ಪಾರ್ವತಿ, ತೊಕ್ಕೊಟ್ಟು
* 2014 ರಿಂದ ಇಲ್ಲಿಯವರೆಗೆ ನನಗೆ ಹಕ್ಕುಪತ್ರ ಸಿಕ್ಕಿಲ್ಲ. ಕೂಡಲೇ ಕ್ರಮ ಕೈಗೊಳ್ಳಿ.

– ಈ ಬಗ್ಗೆ ಮಂಗಳೂರು ತಹಶೀಲ್ದಾರರ ಜತೆಗೆ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಲಾಗುವುದು.

ಉಮಾಕಾಂತ್‌, ಮಂಗಳೂರು
* ಜವಳಿ ಉದ್ಯಮ ಆರಂಭಿಸಲು ಸಾಲ ಬೇಕಾಗಿದೆ. ಇಲಾಖೆಯಿಂದ ಮಾಹಿತಿ ಸಿಗುತ್ತಿಲ್ಲ.

– ಇಲಾಖೆಯಿಂದ ಯಾವುದೇ ಸಾಲ ನೀಡುವುದಿಲ್ಲ. ಆದರೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಾಲ ದೊರೆಯುತ್ತದೆ. ‘ಉನ್ನತಿ’ ಯೋಜನೆಯಡಿ ಸಾಲಸೌಲಭ್ಯ ಪಡೆಯಬಹುದು.

ಅರುಣ್‌, ಮಂಗಳೂರು
* ಅಸಂಘಟಿತ ಕಾರ್ಮಿಕರಿಗೆ ಯಾವ ಸೌಲಭ್ಯಗಳಿವೆ?

– ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ಇಂಥವರಿಗೆ 60 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಒದಗಿಸಲಾಗುತ್ತದೆ. ವಾಹನ ಚಾಲಕರಿದ್ದಲ್ಲಿ, ವಾಹನ ಖರೀದಿಸಿ ಕೊಡಲಾಗುತ್ತದೆ.

ವಿನೋದ ಬಂಗೇರ, ಕೊಣಾಜೆ
* ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಯಾವವು?

– ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ತಿಂಡಿ, ವಸತಿ, ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳ ಆರೋಗ್ಯ ರಕ್ಷಣೆಗೂ ಒತ್ತು ನೀಡಲಾಗುತ್ತಿದೆ.

ಕೊರಗಪ್ಪ, ಉಪ್ಪಿನಂಗಡಿ
* ಕಡಬ ತಾಲ್ಲೂಕಿನ ಆತೂರಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಸ್ಮಶಾನ ಇಲ್ಲ.

– ಸರ್ಕಾರದಿಂದ ಜಮೀನು ಖರೀದಿಸಿ, ಸ್ಮಶಾನ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಪುತ್ತೂರು ತಹಶೀಲ್ದಾರರನ್ನು ಭೇಟಿ ಮಾಡಿ.

ಲಾರೆನ್ಸ್‌, ಮಂಗಳೂರು
* ಪರಿಶಿಷ್ಟ ಜಾತಿ, ಪಂಗಡದವರಿಗೆ ವಸತಿ ಯೋಜನೆಗಳು ಇವೆಯೇ? ಮನೆ ದುರಸ್ತಿಗೆ ಅನುದಾನ ಸಿಗುತ್ತದೆಯೇ?

– ಗ್ರಾಮ ಪಂಚಾಯಿತಿಗಳಲ್ಲಿ ಅಂಬೇಡ್ಕರ್‌, ರಾಜೀವ ಗಾಂಧಿ, ಇಂದಿರಾ ಆವಾಸ್‌ ಯೋಜನೆಗಳ ಅಡಿಯಲ್ಲಿ ಮನೆಗಳನ್ನು ಪಡೆಯಬಹುದು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗಿಂತ, ಮಂಜೂರಾದ ಮನೆಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಹತ್ತಿರದ ಪಂಚಾಯಿತಿಯನ್ನು ಸಂಪರ್ಕಿಸಿ, ಮನೆ ಪಡೆಯಬಹುದು. ಜತೆಗೆ ಮನೆ ದುರಸ್ತಿಗೂ ಅವಕಾಶ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.