ADVERTISEMENT

‘ಪುರಲ್ದಪ್ಪೆನ ಮೋಕೆದ ಬೊಳ್ಳಿಲು’ ತಂಡಕ್ಕೆ ಪ್ರಶಸ್ತಿ

‘ಪಿಲಿ ನಲಿಕೆ 2025’ –10ನೇ ವರ್ಷದ ಹುಲಿವೇಷ ಕುಣಿತ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:33 IST
Last Updated 3 ಅಕ್ಟೋಬರ್ 2025, 5:33 IST

ಮಂಗಳೂರು: ಪೊಳಲಿಯ ‘ಪುರಲ್ದಪ್ಪೆನ ಮೋಕೆದ ಬೊಳ್ಳಿಲು’ ತಂಡವು  ‘ಪಿಲಿ ನಲಿಕೆ ಪ್ರತಿಷ್ಠಾನ’ವು ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಏರ್ಪಡಿಸಿದ್ದ 10ನೇ ವರ್ಷದ ‘ಪಿಲಿ ನಲಿಕೆ’ ಹುಲಿವೇಷ ಕುಣಿತ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದುಕೊಂಡಿತು.

ವಿಜೇತ ತಂಡಕ್ಕೆ ₹ 10 ಲಕ್ಷ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣಪತ್ರವನ್ನು ಗಣ್ಯರು ವಿತರಿಸಿದರು. ಸ್ಪರ್ಧೆಯ ಎರಡನೇ (₹ 5 ಲಕ್ಷ ನಗದು ಸಹಿತ) ಬಹುಮಾನವನ್ನು ಸೋಮೇಶ್ವರ ಫ್ರೆಂಡ್ಸ್‌ ಸರ್ಕಲ್‌ ಹಾಗೂ ಗೋರಕ್ಷನಾಥ ಫ್ರೆಂಡ್ಸ್‌ ಸರ್ಕಲ್‌ ತಂಡಗಳು ಹಂಚಿಕೊಂಡವು. ₹ 3 ಲಕ್ಷ ನಗದು ಒಳಗೊಂಡ ಮೂರನೇ ಬಹುಮಾನ ಎಮ್ಮೆಕೆರೆ ಫ್ರೆಂಡ್ಸ್‌ ಸರ್ಕಲ್‌ ತಂಡದ ಪಾಲಾಯಿತು. 

ಅಕ್ಕಿಮುಡಿ ಎಸೆಯುವ ವಿಶೇಷ ಬಹುಮಾನವನ್ನು ಗೋರಕ್ಷನಾಥ ಫ್ರೆಂಡ್ಸ್‌, ಬಣ್ಣಗಾರಿಕೆಯಲ್ಲಿ ಸೋಮೇಶ್ವರ ಫ್ರೆಂಡ್ಸ್‌ ಸರ್ಕಲ್‌, ತಾಸೆ ವಿಭಾಗದಲ್ಲಿ ಮುಳಿಹಿತ್ಲು ಫ್ರೆಂಡ್ಸ್‌ ಸರ್ಕಲ್ ತಂಡಗಳು ಗೆದ್ದುಕೊಂಡವು. ಕರಿ ಹುಲಿ ಪ್ರಶಸ್ತಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ತಂಡದ, ಮರಿ ಹುಲಿ ಪ್ರಶಸ್ತಿ ಸೋಮೇಶ್ವರ ಫ್ರಂಡ್ಸ್‌ ಸರ್ಕಲ್‌ ತಂಡದ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಗೋರಕ್ಷನಾಥ ಫ್ರೆಂಡ್ಸ್‌ ಸರ್ಕಲ್‌ ತಂಡ ಪಾಲಾಯಿತು. ಈ ಎಲ್ಲ ವಿಶೇಷ ಬಹುಮಾನ ಗೆದ್ದ ತಂಡಗಳಿಗೆ  ₹ 50 ಸಾವಿರ ನಗದು ಬಹುಮಾನ ನೀಡಲಾಯಿತು. ಭಾಗವಹಿಸಿದ 10 ತಂಡಗಳಿಗೂ ಸ್ಮರಣಿಕೆ ಹಾಗೂ ₹ 50 ಸಾವಿರ ಗೌರವಧನ ನೀಡಲಾಯಿತು. 

ADVERTISEMENT

ಕುದ್ರೋಳಿ ಕ್ಷೇತ್ರದ ಖಜಾಂಚಿ ಪದ್ಮರಾಜ ಪೂಜಾರಿ, ‘ಮಂಗಳೂರು ದಸರಾಕ್ಕೆ ಪಿಲಿ ನಲಿಕೆಯಿಂದ ಮೆರುಗು ಬಂದಿದೆ. ಮಂಗಳೂರು ದಸರಾ ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೇ ಧಾರ್ಮಿಕ ಹಿನ್ನೆಲೆಯೆ ಪಿಲಿ ನಲಿಕೆಯನ್ನು ಜೋಡಿಸಿದ್ದೇವೆ. ಮುಂದೆ ನಾವೆಲ್ಲ ಸೇರಿ ಇದನ್ನು ಸಂಪೂರ್ಣ ನಾಡ ಹಬ್ಬದಂತೆ ಆಚರಿಸೋಣ’ ಎಂದರು. 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು. ಪಿಲಿ ನಲಿಕೆ ಪ್ರತಿಷ್ಠಾನದ ಮಿಥುನ್ ಎಂ. ರೈ, ಪ್ರವೀಣ್ ಚಂದ್ರ ಆಳ್ವ, ಪ್ರಕಾಶ್ ಸಾಲ್ಯಾನ್ ಅನಿಲ್ ಕುಮಾರ್‌, ದಿಲ್‌ರಾಜ್ ಆಳ್ವ, ಸುಧಾಕರ್‌,  ಸತ್ಯಜಿತ್ ಸುರತ್ಕಲ್‌, ಗುರುಚರಣ್‌,  ಸಂತೋಷ್ ಪೂಜಾರಿ ಮತ್ತಿತರರು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.