ADVERTISEMENT

ಬಡರೋಗಿಗಳ ಚಿಕಿತ್ಸೆಗೆ ‘ಪಾಕೆಟ್ ಮನಿ’ ಕೊಡುಗೆ

₹ 10 ಸಾವಿರದಷ್ಟು ಹಣ ನೀಡಿದ ಬಾಲಕಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 4:42 IST
Last Updated 2 ಜುಲೈ 2021, 4:42 IST
ಪುತ್ತೂರಿನ ಬಾಲಕಿ ದಿಶಾ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರಿಗೆ ನೀಡಿದಳು
ಪುತ್ತೂರಿನ ಬಾಲಕಿ ದಿಶಾ ತಾನು ಕೂಡಿಟ್ಟಿದ್ದ ಪಾಕೆಟ್ ಮನಿಯನ್ನು ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರಿಗೆ ನೀಡಿದಳು   

ಪುತ್ತೂರು: ತನ್ನ ತಾತ, ಅಜ್ಜಿ, ಮಾವ, ಅಪ್ಪ, ಅಮ್ಮ ನೀಡಿದ್ದ ಪಾಕೆಟ್ ಮನಿಯನ್ನು ಕೂಡಿಟ್ಟಿದ್ದ ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳು ಅದನ್ನು ತನ್ನ ಜನ್ಮದಿನದ ಸಂದರ್ಭದಲ್ಲಿ ಬಡರೋಗಿಗಳ ಚಿಕಿತ್ಸೆಗಾಗಿ ನೀಡಿದ್ದಾಳೆ.

‘ವೈದ್ಯರ ದಿನ’ವಾದ ಗುರುವಾರ ಪುತ್ತೂರಿನ ಆದರ್ಶ ಆಸ್ಪತ್ರೆಯ ಡಾ.ಎಂ.ಕೆ.ಪ್ರಸಾದ್ ಅವರಿಗೆ ₹ 10 ಸಾವಿರದಷ್ಟು ಹಣ ನೀಡುವ ಮಾಡುವ ಮೂಲಕ ಜನ್ಮದಿನವನ್ನು ಪುತ್ತೂರಿನ ದಿಶಾ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾಳೆ.

ಯಕ್ಷಗಾನ ಕಲಾವಿದರಾಗಿದ್ದ ಬನ್ನೂರಿನ ದಿವಂಗತ ಶ್ರೀಧರ್ ಭಂಡಾರಿ ಅವರ ಮೊಮ್ಮಗಳು, ಪುತ್ತೂರಿನ ನೆಹರೂನಗರದ ವಿವೇಕಾನಂದ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿಯಾದ ದಿಶಾ, ಉದ್ಯಮಿ ದೀಪಕ್‌ ಶೆಟ್ಟಿ ಮತ್ತು ಪ್ರಧಾನಮಂತ್ರಿ ಜನೌಷಧಿ ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ಡಾ.ಅನಿಲಾ ದಂಪತಿಯ ಪುತ್ರಿ.

ADVERTISEMENT

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಡ ರೋಗಿಗಳು ಔಷಧಿ ವೆಚ್ಚ ಭರಿಸಲು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ಪತ್ರಿಕೆ, ಮಾಧ್ಯಮಗಳ ಮೂಲಕ ಅರಿತಿದ್ದ ದಿಶಾ, ಬಡರೋಗಿಗಳಿಗೆ ಒಂದಿಷ್ಟಾದರೂ ನೆರೆವಾಗಲೆಂದು ತಾನು ಕೂಡಿಟ್ಟಿದ್ದ ಹಣವನ್ನು ಡಾ.ಎಂ.ಕೆ.ಪ್ರಸಾದ್ ಅವರಿಗೆ ಹಸ್ತಾಂತರಿಸಿದ್ದಾಳೆ. ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ವೈದ್ಯರಿಗೆ ಶುಭಾಶಯವನ್ನೂ ತಿಳಿಸಿದ್ದಾಳೆ.

‘ಇವತ್ತು ನನ್ನ ಜನ್ಮದಿನ. ಆದರೆ, ಅದ್ಧೂರಿಯಾಗಿ ಆಚರಣೆ ಮಾಡಿಲ್ಲ. ತಾನು ಕೂಡಿಟ್ಟಿದ್ದ ಹಣದ ಪೊಟ್ಟಣವನ್ನು ವೈದ್ಯರಿಗೆ ನೀಡಿ, ಆ ಹಣದಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದೇನೆ’ ಎಂದಳು ದಿಶಾ

ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ, ಲಕ್ಷ್ಮೀಪ್ರಸಾದ್ ಬೊಟ್ಯಾಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.