ADVERTISEMENT

ಪೊಳಲಿ: ಮಾರ್ಚ್‌ 11ರಂದು ಷಷ್ಠಿರಥ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:05 IST
Last Updated 25 ಫೆಬ್ರುವರಿ 2020, 12:05 IST

ಬಂಟ್ವಾಳ: ‘ತಾಲ್ಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಿಗೆ ದೇವಾಡಿಗ ಸಮಾಜದ ವತಿಯಿಂದ ಸುಮಾರು ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಷಷ್ಠಿರಥವನ್ನು ಮಾರ್ಚ್‌ 11ರಂದು ಸಮರ್ಪಿಸಲಾಗುವುದು’ ಎಂದು ಸಮಿತಿ ಅಧ್ಯಕ್ಷ ರಾಮದಾಸ್ ಬಂಟ್ವಾಳ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೊಳಲಿ ಕಾಷ್ಠಶಿಲ್ಪಿ ಗಣೇಶ್ ಆಚಾರ್ಯ ನೇತೃತ್ವದ ತಂಡವು ಈಗಾಗಲೇ ಆಕರ್ಷಕ ರಥವನ್ನು ಬಹುತೇಕ ಪೂರ್ಣಗೊಳಿಸಿದೆ. ಸಾಗವಾನಿ, ಬೋಗಿ, ಹೆಬ್ಬಲಸು, ಸಂಪಿಗೆ ಹೀಗೆ ನಾಲ್ಕು ಬಗೆಯ ಮರಗಳಿಂದ ನಿರ್ಮಾಣಗೊಂಡ ರಥಕ್ಕೆ ಸುತ್ತಲೂ ಕಟ್ಟುವುದಕ್ಕೆ ಬೆತ್ತ ಸುಬ್ರಹ್ಮಣ್ಯದಿಂದ ತರಿಸಲಾಗಿದೆ ಎಂದರು.

ಪೊಳಲಿ ಕ್ಷೇತ್ರದಲ್ಲಿ ರಥಕಟ್ಟುವ ಕಾರ್ಯ ನಿರ್ವಹಿಸುತ್ತಿರುವ ದೇವಾಡಿಗ ಸಮುದಾಯವು ಷಷ್ಠಿರಥ ಸಮರ್ಪಿಸಲು ಒಂದು ವರ್ಷದ ಹಿಂದೆ ನಿರ್ಧಾರ ಕೈಗೊಂಡಿತ್ತು. ಇಲ್ಲಿ ವರ್ಷಕ್ಕೆ 5 ಬಾರಿ ಷಷ್ಠಿ ರಥ ಎಳೆಯುವ ಪದ್ಧತಿ ಇದೆ. ಮಾ. 8ರಂದು ಹೊರೆಕಾಣಿಕೆ ಸಮರ್ಪಣೆ, ಮಾ. 9ರಂದು ಶಿಲ್ಪಿಗಳಿಂದ ಷಷ್ಠಿರಥ ಹಸ್ತಾಂತರ, ಮಾ. 10ರಂದು ವಿವಿಧ ವೈದಿಕ ಕಾರ್ಯಗಳ ಜೊತೆಗೆ ಮಾ. 11ರಂದು ಕ್ಷೇತ್ರಕ್ಕೆ ರಥ ಸಮರ್ಪಣೆ ನಡೆಯಲಿದೆ’ ಎಂದರು.

ADVERTISEMENT

‘ಅಂದು ಬೆಳಿಗ್ಗೆ ಗಂಟೆ 8ಕ್ಕೆ ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಉಪಸ್ಥಿತಿಯಲ್ಲಿ ರಥ ಹಸ್ತಾಂತರ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯಿಲಿ, ಮಾಲತಿ ವೀರಪ್ಪ ಮೊಯಿಲಿ, ಸಂಸದ ನಳಿನ್‌ಕುಮಾರ್ ಕಟೀಲ್‌, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯ್ಕ್‌ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಪಾಲ್ಗೊಳ್ಳುವರು’ ಎಂದು ಅವರು ತಿಳಿಸಿದರು.

ಪ್ರವೀಣ್ ಬಿ.ತುಂಬೆ, ಚಂದ್ರಾವತಿ ದೇವಾಡಿಗ, ದಾಮೋದರ ದೇವಾಡಿಗ, ಮುರಳಿ ದೇವಾಡಿಗ, ಪ್ರಶಾಂತ್ ದೇವಾಡಿಗ, ರೋಹಿತಾಕ್ಷ ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.